ಕಂದಾಯ ಇಲಾಖೆಯ ದಾಖಲೆ ಡಿಜಿಟಲೀಕರಣ; ಬಳ್ಳಾರಿ ಜಿಲ್ಲೆ ಮೊದಲ ಸ್ಥಾನ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

0
77

BP NEWS: ಬಳ್ಳಾರಿ: ಡಿಸೆಂಬರ್.07:
ರಾಜ್ಯದಲ್ಲಿಯೇ ಕಂದಾಯ ಇಲಾಖೆ ದಾಖಲೆಗಳನ್ನು ಡಿಜಿಟಲೀಕರಣ ಮಾಡುವಲ್ಲಿ ಬಳ್ಳಾರಿ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಗುರುವಾರ, ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಂದಾಯ ಸಚಿವರ ಇಚ್ಛಾಶಕ್ತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಅಭಿಲೇಖಾಲಯದಲ್ಲಿ ಹಳೇ ಕಡತಗಳ ಪಟ್ಟಿ ಮತ್ತು ಸೂಚ್ಯಂಕ ಕಾರ್ಯ ಕೈಗೆತ್ತಿಕೊಂಡಿದ್ದು, ಸರ್ಕಾರದ ವೆಬ್‍ಸೈಟ್‍ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲೀಕರಣ ಮಾಡಲಾಗುತ್ತಿದೆ. ಈವರೆಗೆ ಒಟ್ಟು 146063 ಕಡತಗಳನ್ನು ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಕಂದಾಯ ಗ್ರಾಮ:
ಜಿಲ್ಲೆಯಲ್ಲಿ ಒಟ್ಟು 73 ಹೊಸ ಕಂದಾಯ ಗ್ರಾಮಗಳನ್ನಾಗಿ ಪರಿರ್ವತಿಸಲು ಗುರುತಿಸಲಾಗಿದ್ದು, ಈ ಪೈಕಿ 06 ತಿಂಗಳ ಅವಧಿಯಲ್ಲಿ 14 ಪ್ರಾಥಮಿಕ ಅಧಿಸೂಚನೆ ಮತ್ತು 07 ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
ಬರ ಪರಿಸ್ಥಿತಿ ನಿರ್ವಹಣೆ:
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಒಟ್ಟು 114 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಿ ಕ್ರಿಯಾ ಯೋಜನೆ ರೂಪಿಸಿಕೊಂಡಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆಗೆ ಪಡೆಯಲಾಗುವುದು ಹಾಗೂ ಕುಡಿಯುವ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದರು.
ಪ್ರಸ್ತುತ ಜಿಲ್ಲಾಧಿಕಾರಿಗಳ ಎಸ್.ಡಿ.ಆರ್.ಎಫ್ ಪಿ.ಡಿ ಖಾತೆಯಲ್ಲಿ ರೂ.37 ಕೋಟಿ ಅನುದಾನ ಲಭ್ಯವಿದ್ದು, ಅನುದಾನದ ಕೊರತೆ ಇರುವುದಿಲ್ಲ. ತಾಲ್ಲೂಕು ತಹಶೀಲ್ದಾರರ ಎಸ್.ಡಿ.ಆರ್.ಎಫ್ ಖಾತೆಯಲ್ಲಿ ಒಟ್ಟು ರೂ.212 ಲಕ್ಷಗಳು ಬರ ನಿರ್ವಹಣೆಗೆ ಲಭ್ಯವಿದ್ದು, ತುರ್ತು ಕಾರ್ಯಗಳಾದ ಕುಡಿಯುವ ನೀರಿನ ಸಮಸ್ಯೆ ಮತ್ತು ಮೇವಿನ ಸಮಸ್ಯೆಗಳಿಗೆ ಪರಿಸ್ಥಿತಿ ಅನುಗುಣವಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಸ್ತುತ 247132 ಮೆ.ಟನ್ ಮೇವು ಲಭ್ಯವಿದ್ದು, ಮುಂದಿನ 25 ವಾರಗಳಿಗೆ ಸಾಕಾಗುತ್ತದೆ. ಮೇವಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಅಂತರ್ ರಾಜ್ಯ ಮೇವು ಸಾಗಾಣಿಕೆಯನ್ನು ನಿರ್ಭಂದಿಸಲಾಗಿದ್ದು, ಬಳ್ಳಾರಿ ಮತ್ತು ಸಿರುಗುಪ್ಪದಲ್ಲಿ ಮೇವಿನ ಚೆಕ್‍ಪೋಸ್ಟ್‍ಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ. ಸಿರುಗುಪ್ಪ ತಾಲ್ಲೂಕಿನಲ್ಲಿ ಹೊರ ರಾಜ್ಯಕ್ಕೆ ಸಾಗಾಣಿಕೆ ಮಾಡಲಾಗುತ್ತಿದ್ದ ಮೇವನ್ನು ಚೆಕ್‍ಪೋಸ್ಟ್‍ಗಳಲ್ಲಿ ಸೀಜ್ ಮಾಡಲಾಗಿದೆ ಎಂದರು.
ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಿ:
ಬರ ಪರಿಸ್ಥಿತಿಯಿಂದ ಹಾನಿಯಾದ ಬೆಳೆ ನಷ್ಟಕ್ಕೆ ಪರಿಹಾರವನ್ನು ಸರ್ಕಾರವು ಫ್ರೂಟ್ಸ್ ತಂತ್ರಾಂಶದ ಮೂಲಕ ನೀಡುತ್ತಿದ್ದು, ನೋಂದಣಿ ಮಾಡಿಸಿಕೊಳ್ಳದ ರೈತರು ಕೂಡಲೇ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆಯ ಕಚೇರಿಗೆ ತೆರಳಿ ದಾಖಲೆಗಳನ್ನು ನೀಡಿ ನೊಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಿಶ್ರಾ ಅವರು ತಿಳಿಸಿದರು.
ಭೂಮಿ ಯೋಜನೆ:
ಜಿಲ್ಲೆಯಲ್ಲಿ ನೋಟೀಸ್ ಇಲ್ಲದೆ ಇರುವ ಪ್ರಕರಣದಲ್ಲಿ 30350 ಪ್ರಕರಣಗಳು ಒಂದು ದಿನದಲ್ಲಿ ಕಾಲವಾಶಗಳಲ್ಲಿ ವಿಲೇಗೊಳಿಸಲಾಗಿದೆ. ನೋಂದಾಯಿತ ಖಾತ ಬದಲಾವಣೆ ಪ್ರಕರಣಗಳು (ತಿಳುವಳಿಕೆ ಚಿಟಿ) ನೋಟೀಸ್ ನೀಡಿ ಸರ್ಕಾರ ನಿಗಧಿಪಡಿಸಿದ 07 ದಿನ ಕಾಲಮಿತಿ ಒಳಗೆ 7962 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ನೊಂದಾಯಿತವಲ್ಲದ ಖಾತ ಬದಲಾವಣೆ ಪ್ರಕರಣಗಳು ನೋಟೀಸು ನೀಡಿ ಸರ್ಕಾರ ನಿಗಧಿಪಡಿಸಿದ 15 ದಿನ ಕಾಲಮಿತಿ ಒಳಗೆ 2406 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಪೈಕಿ ಆರ್.ಟಿ.ಸಿ ಯಲ್ಲಿ 19000 ಪ್ರಕರಣಗಳಿದ್ದು, ಈ ಪೈಕಿ 7518 ವಿಲೇಗೊಳಿಸಲಾಗಿದೆ. ತಹಶೀಲ್ದಾರರ ಹಂತದಲ್ಲಿ ಕಂದಾಯ ಪ್ರಕರಣಗಳು 1405 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ಒಂದು ವರ್ಷ ಮೇಲ್ಪಟ್ಟು 152 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ಸಹಾಯಕ ಆಯುಕ್ತರ ಹಂತದಲ್ಲಿ ಕಂದಾಯ ಪ್ರಕರಣಗಳು 341 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ಒಂದು ವರ್ಷ ಮೇಲ್ಪಟ್ಟು 04 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳ ಹಂತದಲ್ಲಿ ಕಂದಾಯ ಪ್ರಕರಣಗಳು 70 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ಒಂದು ವರ್ಷ ಮೇಲ್ಪಟ್ಟು 01 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ ಎಂದು ಹೇಳಿದರು.
ಇನಾಂ:
ಕರ್ನಾಟಕ ಇನಾಂ ರದತಿ ಕಾಯ್ದೆಯಡಿಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ರೀ-ಗ್ರಾಂಟ್‍ಗಾಗಿ ಒಟ್ಟು 13102 ಅರ್ಜಿಗಳು ಸ್ವೀಕೃತಿಯಾಗಿದ್ದು, ಇವುಗಳ ಪೈಕಿ 25 ಅರ್ಜಿಗಳು ತಿರಸ್ಕøತ ಮಾಡಿ 5645 ಅರ್ಜಿಗಳು ರೀ-ಗ್ರಾಂಟ್ ಮಾಡಿ ಪಟ್ಟಾ ನೀಡಲಾಗಿದೆ. ಇನ್ನು ವಿಚಾರಣೆಗೆ 7432 ಬಾಕಿ ಉಳಿದಿರುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ 2024ರ ಪ್ರಕ್ರಿಯೆ ನಡೆಯುತ್ತಿದ್ದು, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿ.09 ಕೊನೆಯ ದಿನವಾಗಿದೆ. ಜಿಲ್ಲೆಯ 18 ವರ್ಷ ತುಂಬಿದ ಎಲ್ಲಾ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡಿಕೊಳ್ಳಲು ಮತ್ತು ತಿದ್ದುಪಡಿಗಾಗಿ ತಾಲ್ಲೂಕು ಕಚೇರಿಗೆ ಅಥವಾ ಸಂಬಂಧಪಟ್ಟ ಬಿಎಲ್‍ಓಗಳನ್ನು ಭೇಟಿ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಹಾಗೂ ಆಪ್ತ ಸಹಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here