BP NEWS: ಬಳ್ಳಾರಿ: ಡಿಸೆಂಬರ್.01:
ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ ಮನೋಭಾವ ಬರುತ್ತದೆ. ಪ್ರತಿನಿತ್ಯ ಅತ್ಯಂತ ಕ್ರಿಯಾಶೀಲರಾಗಿ ಕರ್ತವ್ಯನಿರ್ವಹಿಸಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರದಂದು ಏರ್ಪಡಿಸಿದ್ದ ಪೋಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೋಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿನಿತ್ಯ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಒಂದು ದಿನವನ್ನು ಕ್ರೀಡಾ ಚಟುವಟಿಕೆಗಾಗಿ ಮೀಸಲಿಡುವುದರಿಂದ ಅವರ ಮನೋಲ್ಲಾಸ ಹೆಚ್ಚುವುದರೊಂದಿಗೆ ಮುಕ್ತವಾಗಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕೆಲಸದ ಒತ್ತಡವನ್ನು ಮರೆಸುತ್ತದೆ. ಕ್ರೀಡೆಗಳನ್ನು ವರ್ಷಕ್ಕೆ ಬದಲು ತಿಂಗಳಲ್ಲಿ ಒಮ್ಮೆ ಆಯೋಜನೆ ಮಾಡಿದರೆ ಕ್ರೀಡೆಯ ಬಗ್ಗೆ ಆಸಕ್ತಿ, ಕ್ರೀಡಾ ಮನೋಭಾವ ಬರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಕ್ರೀಡೆ ಎಂದ ಕೂಡಲೇ ಬಾಲ್ಯದ ಜೀವನ ಮತ್ತೆ ಮರುಕಳಿಸುತ್ತದೆ. ಕ್ರೀಡಾ ಮನೋಭಾವನೆಯಿಂದ ಆಟವಾಡಬೇಕು. ಕ್ರೀಡೆಯನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದಾಗ ಮಾತ್ರ ಸೋಲು-ಗೆಲುವನ್ನು ಸಮಾನವಾಗಿ ಕಾಣಬಹುದು ಎಂದು ಹೇಳಿದರು.
ವಿಜೇತರ ವಿವರ:
ಮಹಿಳೆಯರ 100 ಮೀಟರ್ ಓಟ ಸ್ಪಧೆಯಲ್ಲಿ ಪ್ರಥಮ ಸ್ಥಾನ ಪವಿತ್ರ, ದ್ವಿತೀಯ ಸ್ಥಾನ ಬಸವಜ್ಯೋತಿ, ತೃತೀಯ ಸ್ಥಾನ ವಿದ್ಯಾ ಬಾರ್ಕಿ ಪಡೆದುಕೊಂಡರು.
ಪುರುಷರ 1500 ಮೀಟರ್ ಓಟ ಸ್ಪಧೆಯಲ್ಲಿ ಪ್ರಥಮ ಸ್ಥಾನ ಪಿ.ಎಸ್.ಐ ಕಾಳಿಂಗಪ್ಪ, ದ್ವಿತೀಯ ಸ್ಥಾನ ವಿಠಲ್ ಪೂಜಾರಿ, ತೃತೀಯ ರೇವಣ್ಣ ಸಿದ್ದಪ್ಪ ಪಡೆದುಕೊಂಡರು.
ಪುರುಷರ 200 ಮೀಟರ್ ಓಟ ಸ್ಪಧೆಯಲ್ಲಿ ಪ್ರಥಮ ಸ್ಥಾನ ಕೃಷ್ಣ ನಾಯಕ್, ದ್ವಿತೀಯ ಸ್ಥಾನ ಎರಿಸ್ವಾಮಿ, ತೃತೀಯ ಸ್ಥಾನ ನೆಣಿಕಪ್ಪ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ಸೇರಿದಂತೆ ಪೆÇಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.