BP NEWS: ಬಳ್ಳಾರಿ: ನವೆಂಬರ್.09:
ನಮ್ಮ ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-50ರ ರಥಯಾತ್ರೆಯು ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ನ.16 ರಿಂದ 24ರವರೆಗೆ ಸಂಚರಿಸಲಿದ್ದು, ಈ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಹೇಳಿದರು.
ಜಿಲ್ಲೆಯಲ್ಲಿ ಕರ್ನಾಟಕ ಸಂಭ್ರಮ-50ರ ರಥಯಾತ್ರೆ ಸಂಚಾರ ಕುರಿತಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡಪರ ಸಂಘಟನೆಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವವನ್ನು ವರ್ಷವಿಡಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಕರ್ನಾಟಕ ಸಂಭ್ರಮ-50ರ ರಥಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ನ.16ರಂದು ಬಳ್ಳಾರಿ ಜಿಲ್ಲೆಗೆ ಆಗಮಿಸಲಿದ್ದು, ಒಂದು ವಾರಗಳ ಕಾಲ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸಂಚರಿಸಲಿದೆ. ಜಿಲ್ಲಾ ಹಾಗೂ ತಾಲ್ಲೂಕುಗಳ ಮಟ್ಟದಲ್ಲಿ ರಥಯಾತ್ರೆಯ ಅದ್ದೂರಿ ಸ್ವಾಗತಕ್ಕೆ ಪೂರ್ವತಯಾರಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ಸಂಭ್ರಮ-50ರ ರಥಯಾತ್ರೆಯು ನ.16ರಂದು ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮಕ್ಕೆ ಆಗಮಿಸಲಿದೆ. ಅಲ್ಲಿ ಶಾಸಕರು, ತಹಶೀಲ್ದಾರರು, ತಾಪಂ ಇಒ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ವಿವಿಧ ಸಾಂಸ್ಕøತಿಕ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸುವರು ಎಂದು ತಿಳಿಸಿದ ಅಪರ ಜಿಲ್ಲಾಧಿಕಾರಿಗಳು, ಸಂಡೂರು ತಾಲ್ಲೂಕಿನಲ್ಲಿ ವಿವಿಧೆಡೆ ಸಂಚರಿಸಿ ನ.18ರಂದು ಬಳ್ಳಾರಿ ನಗರಕ್ಕೆ ಆಗಮಿಸಲಿದೆ ಎಂದು ಹೇಳಿದರು.
*ಎರಡು ದಿನಗಳ ವಿಜೃಂಭಣೆ ಕಾರ್ಯಕ್ರಮ:*
ಕರ್ನಾಟಕ ಸಂಭ್ರಮ-50ರ ರಥಯಾತ್ರೆ ಸಂಚಾರ ಹಿನ್ನಲೆಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನ.18ರಿಂದ ಎರಡು ದಿನಗಳ ಕಾಲ ಜಿಲ್ಲಾ ಮಟ್ಟದಲ್ಲಿ ವಿಜೃಂಭಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಡಿಸಿ ಮೊಹಮ್ಮದ್ ಝುಬೇರಾ ಅವರು ಹೇಳಿದರು.
ಅಂದು, ಬೆಳಿಗ್ಗೆ ನಗರದ ಸುಧಾಕ್ರಾಸ್‍ನಿಂದ ರಥಯಾತ್ರೆಗೆ ಅದ್ದೂರಿ ಸ್ವಾಗತ ಮಾಡಲಿದ್ದು, ವಿವಿಧ ಸಾಂಸ್ಕøತಿಕ ಕಲಾತಂಡಗಳು ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳಿಂದ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ನಗರದ ರಾಘವ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ, ಕವಿಗೋಷ್ಠಿ ಸೇರಿದಂತೆ ಕರ್ನಾಟಕ ಏಕೀಕರಣ ಕುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.
*500 ಮೀ. ಉದ್ದದ ಕನ್ನಡ ಬಾವುಟ ಮೆರವಣಿಗೆ:*
ಕರ್ನಾಟಕ ಸಂಭ್ರಮ-50ರ ರಥಯಾತ್ರೆ ಸಂಚಾರ ಅಂಗವಾಗಿ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳನ್ನೊಳಗೊಂಡಂತೆ 500 ಮೀ. ಉದ್ದದ ಕನ್ನಡ ಬಾವುಟದ ಮೆರವಣಿಗೆ ಆಯೋಜಿಸಲು ಯೋಜಿಸಲಾಗಿದೆ. ಈ ಕುರಿತು ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿಗಳಿಗೆ ಎಡಿಸಿ ಅವರು ಸೂಚಿಸಿದರು.
*ಕರ್ನಾಟಕ ಸಂಭ್ರಮ-50ರ ರಥಯಾತ್ರೆಯ ಸಂಚಾರ ವಿವರ:*
ಕರ್ನಾಟಕ ಸಂಭ್ರಮ-50ರ ರಥಯಾತ್ರೆಯು ನ.16ರಂದು ಸಂಡೂರು ತಾಲ್ಲೂಕಿನಲ್ಲಿ ಸಂಚಾರ, ನ.18ರಂದು ಬಳ್ಳಾರಿ ನಗರ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಸಂಚಾರ, ನ.20ರಂದು ಕುರುಗೋಡು ತಾಲ್ಲೂಕು, ನ.22ರಂದು ಕಂಪ್ಲಿ ತಾಲ್ಲೂಕು ಹಾಗೂ ನ.24ಕ್ಕೆ ಸಿರುಗುಪ್ಪ ತಾಲ್ಲೂಕಿನಲ್ಲಿ ಸಂಚರಿಸಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನುರಪ್ಪ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಳಿಗೆಗಳನ್ನು ಹಾಕಬೇಕು ಎಂದು ವಿವಿಧ ಕನ್ನಡಪರ ಸಂಘಟನೆಗಳು ಮನವಿ ಮಾಡಿದರು. ರಥಯಾತ್ರೆ ಸಂಚರಿಸುವ ಮೆರವಣಿಗೆಯ ಮಾರ್ಗಗಳನ್ನು ಬೀದಿ ದೀಪಾಲಂಕಾರ, ಈ ಭಾಗದ ಹುತಾತ್ಮರ ಭಾವಚಿತ್ರದ ದ್ವಾರ ಬಾಗಿಲು ನಿರ್ಮಿಸಬೇಕು. ನಗರದಲ್ಲಿ ವಿವಿಧ ಖಾಸಗಿ ಅಂಗಡಿ-ಮುಂಗಟ್ಟುಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ರಥಯಾತ್ರೆ ಸಂಚಾರ ಅದ್ದೂರಿಯಾಗಿ ಆಚರಿಣೆ ಮಾಡಲು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಮುಖ್ಯವಾಗಿ ಶಾಲೆ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತೆ ಎಡಿಸಿ ಝುಬೇರಾ ಅವರು ಡಿಡಿಪಿಐ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.