BP NEWS: ಬಳ್ಳಾರಿ: ನವೆಂಬರ್.08:
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ, ಧೈರ್ಯದಿಂದ ವಾರ್ಷಿಕ ಪರೀಕ್ಷೆಗಳನ್ನು ಎದುರಿಸುವಂತೆ ಸಜ್ಜುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮುಖ್ಯ ಶಿಕ್ಷಕರಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಫಲಿತಾಂಶ ಸುಧಾರಣೆ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನಗರದ ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಶೇಕಡವಾರು ಫಲಿತಾಂಶ ಉತ್ತಮಗೊಳಿಸಲು ಬೇಕಾದ ಇಲಾಖೆಗೆ ಅಗತ್ಯ ಮಾರ್ಗದರ್ಶನ ಹಾಗೂ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಆತ್ಮ ವಿಶ್ವಾಸ ತುಂಬಿದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಜಿಲ್ಲೆಯಲ್ಲಿನ ಶಾಲೆಗಳಿಗೆ ಅಗತ್ಯಕ್ಕನುಗುಣವಾಗಿ ಅತಿಥಿ ಶಿಕ್ಷಕರನ್ನು ಒದಗಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಯಲ್ಲಿ ಜಿಲ್ಲೆಯನ್ನು ಮುನ್ನಲೆಗೆ ತರಲು ಶಿಕ್ಷಕರು ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಜಿಪಂ ವತಿಯಿಂದ ಫಲಿತಾಂಶ ಸುಧಾರಣೆಗಾಗಿ “ಪ್ರತಿಬಿಂಬ” ಕಾರ್ಯಕ್ರಮದಡಿ ವಿಷಯವಾರು ಅಭ್ಯಾಸ ಪುಸ್ತಕಗಳನ್ನು ವಿತರಿಸಲಾಗಿದೆ. ಜಿಲ್ಲಾ ಖನಿಜ ಪ್ರತಿಷ್ಠಾನ ವತಿಯಿಂದ 9 ಮತ್ತು 10ನೇಯ ತರಗತಿ ವಿದ್ಯಾರ್ಥಿಗಳು ಪ್ರತಿ ಭಾನುವಾರ ವಿದ್ಯಾರ್ಥಿ ವಿಹಾರ ಪ್ರವಾಸ ಕೈಗೊಳ್ಳಲು ಆಯೋಜನೆ ಮಾಡಿದೆ. ಪ್ರಶ್ನೆ ಪತ್ರಿಕೆಗೆ ಖರ್ಚಿನ ಹಣವನ್ನು ಭರಿಸಿದೆ. ಪ್ರತಿ 15 ದಿನಗಳಿಗೊಮ್ಮೆ ಘಟಕ ಪರೀಕ್ಷೆ ನಡೆಸಿ, ಫಲಿತಾಂಶವನ್ನು ವಿಶ್ಲೇಷಣೆ ಮಾಡಲಾಗುತ್ತಿದೆ, ಈ ನಿಟ್ಟಿನಲ್ಲಿ ಅತಿಥಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಒಟ್ಟಾರೆಯಾಗಿ ಜಿಲ್ಲೆಯ ಫಲಿತಾಂಶ ಸುಧಾರಣೆಗಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸನ್ನದ್ಧವಾಗಿದ್ದು, ಮಕ್ಕಳಿಗೆ ಬೆಸ್ಟ್ ಪ್ರಾಕ್ಟೀಸ್ ಮಾಡಿಸುವುದರ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಿಸಲು ಉಳಿದಿರುವ ನಾಲ್ಕು ತಿಂಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಿಕ್ಷಕರಿಗೆ ತಿಳಿಸಿದರು.
ಸಭೆಯಲ್ಲಿ 6ರಿಂದ 8ನೇ ತರಗತಿಗೆ ನೇಮಕವಾದ ಜಿಪಿಟಿ ಶಿಕ್ಷಕರಿಗೆ ನೇಮಕಾತಿ ಆದೇಶಗಳನ್ನು ನೀಡಿ ಶುಭ ಕೋರಿದರು.
ಜಿಲ್ಲಾಧಿಕಾರಿಗಳು, Sಂ-1 ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಖರ್ಚು ಹಣವನ್ನು ಚೆಕ್ ಮೂಲಕ ಡಿಡಿಪಿಐ ಅವರಿಗೆ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಎಂಟು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪೆÇ್ರೀತ್ಸಾಹಿಸಿದರು.
ಜಿಲ್ಲಾ ನೋಡಲ್ ಅಧಿಕಾರಿ ಎ.ಕೆ.ಸತ್ಯ ನಾರಾಯಣ ಅವರು, ಫಲಿತಾಂಶ ಸುಧಾರಣೆಗಾಗಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಪಿಪಿಟಿ ಮೂಲಕ ಸಮಗ್ರವಾಗಿ ಮಂಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎ.ಹನುಮಕ್ಕ, ಜಿಲ್ಲಾ ಬಿಸಿಯೂಟ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ, ಬಳ್ಳಾರಿ ಪೂರ್ವ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಯೀಮುರ್ ರೆಹಮಾನ್, ಕುರುಗೋಡು ತಾಲೂಕಿನ ಬಿಇಒ ಟಿ.ಎಂ ಸಿದ್ದಲಿಂಗಮೂರ್ತಿ, ಸಿರುಗುಪ್ಪ ತಾಲೂಕಿನ ಬಿಇಒ ಹೆಚ್.ಗುರಪ್ಪ, ಗಣಿತ ವಿಷಯ ಪರಿವೀಕ್ಷಕ ಎಂ.ಬಸವರಾಜ್, ಬಳ್ಳಾರಿ ಪೂರ್ವ ವಲಯದ ಶಿಕ್ಷಣ ಸಂಯೋಜಕ ಗೂಳೆಪ್ಪ, ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಹೆಚ್.ವೀರೇಶಪ್ಪ ಸೇರಿದಂತೆ ಎಲ್ಲಾ ತಾಲೂಕಿನ ಕ್ಷೇತ್ರ ಸಮನ್ವಯ ಅಧಿಕಾರಿಗಳು, ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಗಳು, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕರು ಹಾಗೂ ನಾಲ್ಕು ತಾಲೂಕುಗಳ ಸರ್ಕಾರಿ ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಜರಿದ್ದರು.