ಜಿಲ್ಲಾಡಳಿತದಿಂದ ನಂದಿನಿ ಅಗಸರ ಅವರಿಗೆ ಸನ್ಮಾನ

0
118

BP NEWS: ಬಳ್ಳಾರಿ: ಅಕ್ಟೋಬರ್.14:

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ 2022 ರ ಮಹಿಳೆಯರ ಹೆಪ್ಟಾಥ್ಲಾನ್ 800 ಮೀಟರ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ನಂದಿನಿ ಅಗಸರ ಅವರನ್ನು ಜಿಲ್ಲಾಡಳಿತದಿಂದ ಶನಿವಾರ ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು.

ನಂದಿನಿ ಅವರು, ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮದಲ್ಲಿ ಜನಿಸಿದವರು. ಇತ್ತೀಚೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2022 ರ ಏಷ್ಯನ್ ಗೇಮ್ಸ್ ನಲ್ಲಿ ಹೆಪ್ಟಾಥ್ಲಾನ್ ಈವೆಂಟ್ ನಲ್ಲಿ 800 ಮೀ. ನಲ್ಲಿ ಕಂಚಿನ ಪದಕ ಪಡೆದುಕೊಂಡು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ನಿರ್ದೇಶನದಂತೆ, ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಂದಿನಿ ಅಗಸರ ಅವರನ್ನು ಸನ್ಮಾನ ಮಾಡಲಾಯಿತು.

“ನಮ್ಮ ಜಿಲ್ಲೆಯ ವಜ್ರದಂತಿರುವ ಮನೆ ಮಗಳು ನಂದಿನಿ ಅಗಸರ ಅವರು, ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕ್ರೀಡಾ ತರಬೇತಿಗಾಗಿ ಅವರಿಗೆ ರೂ.3 ಲಕ್ಷ ಗೌರವಧನವಾಗಿ ನೀಡಲಾಗುವುದು” ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.

“ಕ್ರೀಡಾ ಮನೋಭಾವ ಮತ್ತು ಶ್ರೇಷ್ಠತೆಯನ್ನು ರೂಪಿಸಿಕೊಂಡಿರುವ ನಂದಿನಿ ಅವರು, ಮುಂದಿನ ದಿನಗಳಲ್ಲಿ ಒಲಂಪಿಕ್ಸ್ ಕ್ರೀಡೆಗಳಲ್ಲಿ ಭಾಗವಹಿಸಿ, ಇನ್ನೂ ಹೆಚ್ಚಿನ ಪದಕಗಳನ್ನು ತಮ್ಮದಾಗಿಸಿಕೊಂಡು, ನಮ್ಮ ದೇಶ, ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತರಬೇಕು ಎಂದು ಆಶಿಸುತ್ತೇನೆ. ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭವಾಗಲಿ” ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.

“ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹಿಸಿದ ನನ್ನ ತಂದೆ-ತಾಯಿಗೆ ಈ ಕೀರ್ತಿ ಸಲ್ಲುತ್ತದೆ. ತರಬೇತಿಯಲ್ಲಿ ಕಾಳಜಿ ಮತ್ತು ಆಸಕ್ತಿ ವಹಿಸಿ ನನಗೆ ಶಕ್ತಿ ತುಂಬಿದ ನನ್ನ ಮಾರ್ಗದರ್ಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ನನ್ನನ್ನು ಗುರುತಿಸಿ ಸನ್ಮಾನಿಸಿದ ಜಿಲ್ಲಾಡಳಿತಕ್ಕೆ ಕೃತಜ್ಞತೆಗಳು” ಎಂದು ನಂದಿನಿ ಅಗಸರ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಮೇಯರ್ ಬಿ.ಜಾನಕಿ, ವಿಧಾನ ಪರಿಷತ್ ಶಾಸಕ ವೈ.ಎಂ.ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಬಳ್ಳಾರಿ ತಹಶೀಲ್ದಾರ ಗುರುರಾಜ, ಸಿರುಗುಪ್ಪ ತಹಶೀಲ್ದಾರ ವಿಶ್ವನಾಥ, ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಹೊನ್ನೂರಪ್ಪ, ನಂದಿನಿ ಅವರ ತಂದೆ ಯಲ್ಲಪ್ಪ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here