BP NEWS: ಬಳ್ಳಾರಿ: ಅಕ್ಟೋಬರ್.01:
ಪ್ರತಿಯೊಬ್ಬರು ಸ್ವಚ್ಚತೆ ಕಡೆ ಗಮನ ಹರಿಸಬೇಕು. ನಗರದ ನಾನಾ ಕಡೆ ಕಸ, ತ್ಯಾಜ್ಯ ಹರಡುವುದನ್ನು ಸಾರ್ವಜನಿಕರು ಸ್ವ-ಇಚ್ಛೆಯಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕರೆ ನೀಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜನ್ಮ ದಿನಾಚರಣೆ ಸ್ಮರಣಾರ್ಥವಾಗಿ ದೇಶದಾದ್ಯಂತ ಹಮ್ಮಿಕೊಳ್ಳಲಾಗಿರುವ “ಸ್ವಚ್ಛತೆಯೇ ಸೇವೆ” ಅಭಿಯಾನದಡಿ, ಭಾನುವಾರ ನಗರದ ಕೆಕೆಆರ್‍ಟಿಸಿ ಹೊಸ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ನಾನಾ ಕಡೆ ಹಮ್ಮಿಕೊಂಡಿದ್ದ ಸ್ವಚ್ಛತೆ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಚ್ಛತೆಯ ಕುರಿತು, ಜಿಲ್ಲಾಡಳಿತವು ಈಗಾಗಲೇ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದು, ಕಸ ಹಾಗೂ ಇತರೆ ತ್ಯಾಜ್ಯಗಳನ್ನು ಸಿಕ್ಕ-ಸಿಕ್ಕಲ್ಲಿ ಎಸೆಯಬಾರದು, ಬದಲಾಗಿ ತಮ್ಮ ಮನೆಗಳ ಮುಂದೆ ಪ್ರತಿದಿನ ಬೆಳಿಗ್ಗೆ ಬರುವ ನಗರ ಪಾಲಿಕೆಯ ವಾಹನಗಳಿಗೆ ನೀಡಬೇಕು. ಸ್ವಚ್ಛತೆಯಿಂದ ಇದ್ದರೆ ಆರೋಗ್ಯ ಕೂಡ ಚೆನ್ನಾಗಿ ಕಾಪಾಡಿಕೊಳ್ಳಬಹುದು, ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಜಾನಕಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಮಹಾನಗರ ಪಾಲಿಕೆ ಆಯುಕ್ತ ಖಲೀಲ್ ಸಾಹೇಬ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಾಲಿಕೆಯ ಸದಸ್ಯರು, ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.