BP NEWS: ಬಳ್ಳಾರಿ: ಸೆಪ್ಟೆಂಬರ್.26:
ಜಿಲ್ಲೆಯಲ್ಲಿ 22 ವರ್ಷದಿಂದ ಬೇಡಿಕೆಯಾಗಿಯೇ ಉಳಿದಿದ್ದ, ಗುರುಭವನ ಕಟ್ಟಡವನ್ನು ಡಿಎಂಎಫ್ ಅನುದಾನದಲ್ಲಿ ರೂ.12 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಡಲಾಗುವುದು ಎಂದು ಯುವಜನ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಅಸ್ತು ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 135ನೇ ಜನ್ಮ ದಿನಾಚರಣೆಯ ಅಂಗವಾಗಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ರಸ್ತೆಯ ಗೃಹರಕ್ಷಕದಳದ ಕಚೇರಿ ಪಕ್ಕದಲ್ಲಿನ ಗುರುಭವನ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಭರವಸೆ ನೀಡಿದರು.
ನಾನಾ ವರ್ಷಗಳಿಂದ ಜಿಲ್ಲೆಯ ಎಲ್ಲಾ ಶಿಕ್ಷಕರ ಬಹುಬೇಡಿಕೆಯಾಗಿ ಉಳಿದಿದ್ದ ಗುರುಭವನ ಕಟ್ಟಡವನ್ನು, ಡಿಎಂಎಫ್ ಅನುದಾನದಲ್ಲಿ ರಾಜ್ಯದಲ್ಲಿಯೇ ಮಾದರಿಯಾಗುವಂತಹ ಗುರುಭವನ ನಿರ್ಮಾಣ ಮಾಡಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದರು.
ಒಂದು ನಾಡು ಮತ್ತು ದೇಶವನ್ನು ಪ್ರಬುದ್ಧವಾಗಿ ನಡೆಸಬೇಕೆಂದರೆ ವಿದ್ಯಾವಂತರಿಂದ ಮಾತ್ರ ಸಾಧ್ಯ. ಅಂತಹ ಪ್ರತಿಯೊಬ್ಬ ವಿದ್ಯಾವಂತರನ್ನು ರೂಪಿಸುವುದೇ ಶಿಕ್ಷಕರು. ಒಂದು ದೇಶ ಪ್ರಗತಿ ಹೊಂದಬೇಕಾದರೆ ಅಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಜೀವನದಲ್ಲಿ ಪ್ರತಿಯೊಬ್ಬರೂ ಹುಟ್ಟಿನಿಂದ ಸಾಯುವವರೆಗೂ ನೆನಪಿಸಿಕೊಳ್ಳುವುದು ಎಂದರೆ ಅದು ಶಿಕ್ಷಕರನ್ನು ಮಾತ್ರ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಭಾರತದ ಮಹಾ ಶಿಕ್ಷಣ ತಜ್ಞ, ಮೊದಲ ಉಪರಾಷ್ಟ್ರಪತಿ, 2ನೇ ರಾಷ್ಟ್ರಪತಿ ಹಾಗೂ ಉತ್ತಮ ಶಿಕ್ಷಕರಾದ ಸರ್ವಪಲ್ಲಿ ರಾಧಾಕೃಷ್ಣನ್‍ರವರ 135 ಜನ್ಮದಿನಾಚರಣೆಯ ಅಂಗವಾಗಿ ಸೆ.05ರಂದು “ಶಿಕ್ಷಕರ ದಿನಾಚರಣೆ” ಆಗಿದ್ದು, ಕಾರಣಾಂತರಗಳಿಂದ ಇಂದು ಆಚರಿಸುತ್ತಿದ್ದೇವೆ. ಮುಖ್ಯವಾಗಿ ಅವರ ಮೌಲ್ಯ ಮತ್ತು ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಭೋಧನೆ ನೀಡಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಒಬ್ಬ ಉತ್ತಮ ಶಿಕ್ಷಕ ವಿದ್ಯಾರ್ಥಿಗಳಲ್ಲಿ ಎಲ್ಲಾ ಧರ್ಮ, ಜಾತಿ, ಸಂಸ್ಕøತಿಯನ್ನು ಕಲಿಸಬೇಕು. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಒಳಗೊಂಡಂತೆ ಇತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಹೆಣ್ಣು ಮಕ್ಕಳಿಗೆ ಶುಚಿತ್ವದ ಬಗ್ಗೆಯೂ ತಿಳಿಸಿಕೊಡಬೇಕು ಎಂದು ಹೇಳಿದರು.
ಹೊರಗುತ್ತಿಗೆ ಆಧಾರದ ಮೇಲೆ ದೈಹಿಕ ಶಿಕ್ಷಕರ ನೇಮಕ:
ಕ್ರೀಡೆಗೆ ಪ್ರೋತ್ಸಾಹ ನೀಡಲು ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಕ್ರೀಡಾ ಸಚಿವರೂ ಆಗಿರುವ ಬಿ.ನಾಗೇಂದ್ರ ಅವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು; ನಿಮ್ಮಂತೆಯೇ ನನ್ನ ಬೇಡಿಕೆಯೂ ಇದ್ದು, ಬಳ್ಳಾರಿ ಜಿಲ್ಲೆಯು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದ್ದು, ಅದನ್ನು ಮುಂಚೂಣಿಗೆ ತರಲು ವಿಶೇಷ ಕಾಳಜಿ ವಹಿಸಬೇಕು ಎಂದು ಶಿಕ್ಷಕರಿಗೆ ಮನವಿ ಮಾಡಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಬಿ.ಜಾನಕಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕಿ ಹನುಮಕ್ಕ.ಎ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಶಿವಾಜಿರಾವ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯ ಅಧಿಕಾರಿಗಳು, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಎಲ್ಲಾ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಶಿಕ್ಷಕರು, ಸಾರ್ವಜನಿಕರು ಉಪಸ್ಥಿತರಿದ್ದರು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ: 2023-24ನೇ ಸಾಲಿನಡಿ 16 ಜನರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಪ್ರದಾನ ಮಾಡಿ ಗೌರವಿಸಿದರು.
ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ವಿವರ:
ಕಿರಿಯ ಪ್ರಾಥಮಿಕ ಶಾಲೆ ವಿಭಾಗ:
ಬಳ್ಳಾರಿ ಪೂರ್ವ ವಲಯ ಸಿರಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿವಲೀಲಾ ಕಲಹಾಳ್ ಮತ್ತು ಸಿಂಧಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಜಾಜ್ ಅಹಮದ್. ಕುರುಗೋಡು ತಾಲೂಕು ಏಳುಬೆಂಚಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿ.ಎಂ.ವೀಣಾ. ಸಂಡೂರು ತಾಲೂಕಿನ ಎಸ್.ಬಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೀತಾ. ಸಿರುಗುಪ್ಪ ತಾಲೂಕಿನ ಸಿರಿಗೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುಮಂಗಳಾ ಮೇಟಿ. ಕಂಪ್ಲಿ ತಾಲೂಕಿನ ಅರಳಿಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಫ್.ಇಮಾಮ್ ಸಾಬ್.
ಹಿರಿಯ ಪ್ರಾಥಮಿಕ ಶಾಲೆ ವಿಭಾಗ:
ಬಳ್ಳಾರಿ ಪೂರ್ವ ವಲಯ ಹೊಸ ಮೋಕಾದ ಕಿರಿಯ ಪ್ರಾಥಮಿಕ ಶಾಲೆಯ ಎಮ್.ಎಲ್ ಮಂಗಳ, ಕುರುಗೋಡ ತಾಲೂಕು ವ್ಯಾಪ್ತಿಯ ಕೌಲ್ ಬಜಾರ್ ನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ನುಸ್ರತುನ್ನಿಸಾ, ಸಂಡೂರು ತಾಲೂಕಿನ ನಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಿ.ಸುಜಾತ, ಸಿರುಗುಪ್ಪ ತಾಲೂಕಿನ ಕೊಂಚಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್.ದುರುಗಪ್ಪ, ಕಂಪ್ಲಿ ತಾಲೂಕಿನ ಕಣವಿ ತಿಮ್ಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಿ.ವೀರೇಶ್.
ಪ್ರೌಢ ಶಾಲೆ ವಿಭಾಗ:
ಬಳ್ಳಾರಿ ಪೂರ್ವ ವಿಭಾಗ ಹಗರಿ ಫಾರ್ಮ್ ಸರ್ಕಾರಿ ಪ್ರೌಢ ಶಾಲೆಯ ಹೆಚ್.ಈಶ್ವರಪ್ಪ, ಕುರುಗೋಡು ತಾಲೂಕು ವ್ಯಾಪ್ತಿಯ ಕೌಲ್ ಬಜಾರ್ ನ ಶ್ರೀ ಮರಿ ಬಸಮ್ಮ ಪ್ರೌಢ ಶಾಲೆಯ ನಾಗರಾಜಯ್ಯ ಬಿ.ಎಂ., ಸಂಡೂರು ತಾಲೂಕಿನ ದೋಣಿಮಲೈ ಸರ್ಕಾರಿ ಪ್ರೌಢ ಶಾಲೆಯ ಡಿ.ನಾಗರಾಜ, ಸಿರುಗುಪ್ಪ ತಾಲೂಕಿನ ಮಣ್ಣೂರು ಸೂಗೂರು ಸರ್ಕಾರಿ ಪ್ರೌಢ ಶಾಲೆಯ ಆರ್.ರವಿ, ಕಂಪ್ಲಿ ತಾಲೂಕಿನ ಎಸ್.ಎಮ್. ಬಾಲಕರ ಸರ್ಕಾರಿ ಪ್ರೌಢ ಶಾಲೆಯ ಡಾ.ಸುನಿಲ್.ಬಿ.