ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸುವಂತೆ ಜಿಲ್ಲಾಡಳಿತ ಮನವಿ

0
89

BP NEWS: ಬಳ್ಳಾರಿ: ಸೆಪ್ಟೆಂಬರ್.16:
ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ಮಾಡಿರುವ ಹಾಗೂ ರಾಸಾಯನಿಕ ಬಣ್ಣ ಲೇಪಿತವಾದಂತಹ ಗಣೇಶ ವಿಗ್ರಹಗಳನ್ನು ಅಥವಾ ಮೂರ್ತಿಗಳನ್ನು ಬಳಸದೇ, ಮಣ್ಣಿನಿಂದ ಮಾಡಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿ, ವಿಗ್ರಹಗಳಿಂದ ಗೌರಿ ಗಣೇಶ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಮಾಲಿನ್ಯ ಮಂಡಳಿಯು ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಮಾಡಿರುವ ಹಾಗೂ ರಾಸಾಯನಿಕ ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ಕೆರೆ ನದಿ ಕಾಲುವೆ, ಬಾವಿ ಹಾಗೂ ಇತರೆ ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿರುತ್ತದೆ. ಮಂಡಳಿಯು ಹೊರಡಿಸಿರುವ ಅಧಿಸೂಚನೆಯನ್ನು ಉಲ್ಲಂಘನೆ ಮಾಡುವವರಿಗೆ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ಮಾಡಿದ ಹಾಗೂ ಬಣ್ಣ ಲೇಪಿತವಾದ ಗಣೇಶ ವಿಗ್ರಹಗಳು ಮತ್ತು ಮೂರ್ತಿಗಳನ್ನು ತಯಾರಿಸುವಿಕೆ ಮತ್ತು ಮಾರಾಟ ಮಾಡುವಂತಿಲ್ಲ. ಅನಧಿಕೃತವಾಗಿ ತಯಾರಿ, ಮಾರಾಟ ಮಾಡುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಗಳ ಮೇಲೆ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಂಚಾಯತಿ, ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಪೂರ್ಣ ಮಣ್ಣಿನಿಂದ ಹಾಗೂ ಬಣ್ಣ ಲೇಪಿತವಲ್ಲದ ಗಣೇಶ ವಿಗ್ರಹಗಳನ್ನು ಮಾತ್ರ ಜಲ ಮೂಲ (ನದಿ,ಕೆರೆ) ಗಳ ಬಳಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡುವುದು ಹಾಗೂ ಘನ ತ್ಯಾಜ್ಯಗಳನ್ನು ವಿಗ್ರಹಗಳ ಜೊತೆ ವಿಸರ್ಜಿಸಲು ಅವಕಾಶ ನೀಡದಂತೆ, ಘನತ್ಯಾಜ್ಯಗಳನ್ನು ಪ್ರತ್ಯೇಕವಾಗಿ ನಿಯಮಾವಳಿಗಳ ಪ್ರಕಾರ ವಿಲೇವಾರಿ ಮಾಡುವಂತೆ ಆಯಾ ವ್ಯಾಪ್ತಿಯ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಂಚಾಯತಿ ಮಟ್ಟದ ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಶಬ್ದ ಮಾಲಿನ್ಯ (ನಿಬರ್ಂಧ ಮತ್ತು ನಿಯಂತ್ರಣ) ನಿಯಮಗಳು 2000ರ ನಿಯಮಗಳು 2(ಸಿ) ರಡಿಯಲ್ಲಿ ನಿಯೋಜಿತ ಪ್ರಾಧಿಕಾರದಿಂದ ಲಿಖಿತ ಅನುಮತಿಯನ್ನು ಪಡೆಯದ ಧ್ವನಿವರ್ಧಕಗಳನ್ನು ಸಾರ್ವಜನಿಕ ಗಣೇಶ ಪೆಂಡಾಲ್‍ಗಳಲ್ಲಿ ಬಳಸುವ ವಿದ್ಯುನ್ಮಾನ ಉಪಕರಣಗಳು ಮತ್ತು ಶಬ್ದ ಉಂಟು ಮಾಡುವ ಉಪಕರಣಗಳನ್ನು ಬಳಸುವಂತಿಲ್ಲ.
ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಸ್ಟಾಪಿಸುವ ಪೆಂಡಾಲ್‍ಗಳಲ್ಲಿ ಬಲೂನ್‍ಗಳು, ಬಲೂನ್‍ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್‍ಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್‍ಗಳು, ಪ್ಲಾಸ್ಟಿಕ್ ಐಸ್‍ಕ್ರೀಮ್ ಸ್ಟಿಕ್‍ಗಳು, ಅಲಂಕಾರಕ್ಕಾಗಿ ಬಳಸುವ ಪಾಲಿಸೈರೀನ್(ಥರ್ಮೊಕೋಲ್) ಮತ್ತು ಇತರೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವಂತಿಲ್ಲ.
ಸ್ಥಳೀಯ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಹಮ್ಮಿಕೊಂಡು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿದ ನಿರ್ದೇಶನದಂತೆ ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here