ಬಳ್ಳಾರಿಯಲ್ಲಿ ಭಾರತದ ಸಂವಿಧಾನ ಪ್ರಸ್ತಾವನೆಯ ವಾಚನ

0
79

BP NEWS: ಬಳ್ಳಾರಿ: ಸೆಪ್ಟೆಂಬರ್.15:
ಭಾರತ ಸಂವಿಧಾನದ ತತ್ವ ಮತ್ತು ಆಶೋತ್ತರಗಳನ್ನು ಯುವಕರು, ನಾಗರೀಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ನಗರದ ವಿಮ್ಸ್ ಮೈದಾನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಭಾರತದ ಸಂವಿಧಾನ ಪ್ರಸ್ತಾವನೆಯ ವಾಚನ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆಯ ಬೋಧನೆ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ದೊರೆತ ನಂತರ ನಮ್ಮ ದೇಶವನ್ನು ರೂಪಿಸುವಲ್ಲಿ ಪ್ರತಿಯೊಬ್ಬರ ಸಮಾನತೆಯ ದೃಷ್ಟಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ನಮಗೆ ನೀಡಿದ್ದಾರೆ ಎಂದು ತಿಳಿಸಿದ ಅವರು, ಭಾರತವು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದ್ದು, ಪ್ರಪಂಚದ ಇತರೆ ದೇಶಗಳಿಗಿಂತ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದರು.


ರಾಷ್ಟ್ರದಲ್ಲಿನ ನಮ್ಮ ಸಂವಿಧಾನದ ಮಹತ್ವನ್ನು ಯಾರೂ ಮರೆಯಬಾರದು. ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಪಾಲಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಮಾತನಾಡಿ, ಸಂವಿಧಾನವನ್ನು ‘ಸುಪ್ರೀಂ ಆಫ್ ಲ್ಯಾಂಡ್’ ಎಂದೇ ಹೇಳಲಾಗುತ್ತದೆ. ಯಾವುದೇ ಕಾಯ್ದೆಗಳಾಗಲೀ, ಕಾನೂನುಗಳಾಗಲೀ ಅವುಗಳ ಜಾರಿ ಮತ್ತು ತಿದ್ದುಪಡಿಗೆ ಸಂಬಂಧಿಸಿದಂತೆ ಸಂವಿಧಾನದ ತತ್ವಗಳನ್ನು ಪಾಲಿಸಬೇಕಾಗುತ್ತದೆ ಎಂದು ತಿಳಿಸಿದರು.


ನಮ್ಮ ದೇಶವು ವಿವಿಧತೆಯಲ್ಲಿ ಏಕತೆಯನ್ನು ಒಳಗೊಂಡ ರಾಷ್ಟ್ರವಾಗಿದೆ. ಹಲವು ಜಾತಿ-ಧರ್ಮ, ಪಂಗಡ ಮತ್ತು ವಿವಿಧ ಭಾಷೆಗಳನ್ನೊಗೊಂಡ ಒಗ್ಗೂಡಿದ ಜಾತ್ಯತೀತ ರಾಷ್ಟ್ರವಾಗಿದೆ. ಸಂವಿಧಾನ ಜಾರಿಗೊಂಡು ಹಲವು ವರ್ಷ ಕಳೆದರೂ ನಮ್ಮಲ್ಲಿ ಇನ್ನೂ ಸಾಮಾಜಿಕ ಒಗ್ಗಟ್ಟು ಹಾಗೂ ಆರ್ಥಿಕ ಪ್ರಗತಿ ಇದೆ ಎಂದರೆ ಅದು ನಮ್ಮ ಸಂವಿಧಾನಕ್ಕೆ ಇರುವ ಮಹತ್ವವಾಗಿದೆ ಎಂದರು.
ಸಂವಿಧಾನದ ಪೀಠಿಕೆಯಲ್ಲಿ ಆಳವಾದ ಜ್ಞಾನ ಅಡಗಿದ್ದು, ಸಮಾಜದಲ್ಲಿನ ನಾಗರೀಕರು, ಯುವಕರು ಹಾಗೂ ವಿದ್ಯಾರ್ಥಿಗಳು ಸಂವಿಧಾನದ ತತ್ವಗಳನ್ನು ಅರಿಯಬೇಕು. ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಯ ಮುಖಾಂತರ ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.


ಕಾರ್ಯಕಮದಲ್ಲಿ ವಿಧಾನಸೌಧ ಮುಂಭಾಗ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ‘ಸಂವಿಧಾನ ಪ್ರಸ್ತಾವನೆ ಓದು’ ಕಾರ್ಯಕ್ರಮದ ನೇರ ಪ್ರಸಾರ ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಬಿ.ಜಾನಕಿ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಅಬಕಾರಿ ಅಧೀಕ್ಷಕ ಎನ್.ಮಂಜುನಾಥ, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿ ಕುಮಾರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸತೀಶ್.ಕೆ.ಹೆಚ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಓದುತ್ತಿರುವುದು ವಿಶೇಷವಾಗಿ ಕಂಡುಬಂದಿತು.

LEAVE A REPLY

Please enter your comment!
Please enter your name here