ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

0
86

BP NEWS: ಬಳ್ಳಾರಿ: ಸೆಪ್ಟೆಂಬರ್.13:
ವ್ಯಕ್ತಿಯ ಜೀವನದಲ್ಲಿ ಬರುವ ಒತ್ತಡಗಳಿಂದ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ವ್ಯಕ್ತಿಯು ಮಾನಸಿಕ ಖಿನ್ನತೆಗೆ ಒಳಗಾಗುವ ಮೂಲಕ ಅನಾಹುತಗಳಾಗುವ ಸಂಭವವಿರುತ್ತದೆ. ಅಂತವರನ್ನು ಗುರ್ತಿಸಿ ಆಪ್ತ ಸಮಾಲೋಚನೆ ಮೂಲಕ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಆಭಿಪ್ರಾಯ ಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.


ವ್ಯಕ್ತಿಯಲ್ಲಿ ಪದೇ ಪದೇ ಬರುವ ತೀವ್ರ ತರವಾದ ಆಲೋಚನೆಗಳಿಂದ ಅದರಲ್ಲೂ ಸಾಮಾನ್ಯವಾಗಿ 15-25 ವಯಸ್ಸಿನ ಅವಧಿಯಲ್ಲಿ ಗ್ರಾಮಿಣ-ಪಟ್ಟಣ, ಬಡವ-ಶ್ರೀಮಂತ, ಬುದ್ದಿವಂತ-ದಡ್ಡ ಎಂಬ ಬೇಧ ಭಾವವಿಲ್ಲದೆ ಪ್ರತಿಯೊಬ್ಬರಿಗೂ ಮಾನಸಿಕ ಖಿನ್ನತೆ ಬರುತ್ತದೆ. ಇಂಥಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಎದೆಗುಂದದೇ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಯಾವುದೇ ಕಾರಣಕ್ಕೂ ಮನಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬರಬಾರದು. ತಮ್ಮಲ್ಲಿನ ಸಕಾರಾತ್ಮಕ ಭಾವನೆಗಳಿಗೆ ತೊಂದರೆಯಾದರೆ ಮತ್ತು ಮಾನಸಿಕ ಕಿರಿಕಿರಿಯಾದರೇ ಅದಷ್ಟು ಬೇಗ ಮನೋವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಮಾತನಾಡಿ, ಪ್ರತೀ ತಿಂಗಳು, ಪ್ರತೀ ವಾರದ ಮಂಗಳವಾರ ಜಿಲ್ಲೆಯ ಎಲ್ಲಾ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮನೋ ಚೈತನ್ಯ ಕಾರ್ಯಕ್ರಮ ಹಮ್ಮಿಕೊಂಡು ಮಾನಸಿಕ ರೋಗಿಗಳಿಗೆ, ಸಣ್ಣ ಪುಟ್ಟ ಮಾನಸಿಕ ತೊಂದರೆ ಇರುವ ಮನೋ ರೋಗಿಗಳಿಗೆ ಅಪ್ತ ಸಮಾಲೋಚನೆ ಹಾಗೂ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ ಪ್ರತಿಯೊಬ್ಬರು ಇದರÀ ಸದುಪಯೊಗ ಪಡೆದುಕೊಳ್ಳಬೇಕು ಎಂದರು.
ಮಾನಸಿಕ ಸಮಸ್ಯೆಗಳಿಗೆ ಒಳಗಾದವರು ಅದರಲ್ಲಿ ಮುಖ್ಯವಾಗಿ ವ್ಯಥೆಗೆ ಒಳಪಟ್ಟವರು, ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆ, ಆತ್ಮಹತ್ಯೆ ಅಲೋಚನೆ, ಮಾಧಕ ವ್ಯಸನಕ್ಕೆ ಒಳಗಾದವರು, ಜ್ಞಾಪಕ ಶಕ್ತಿ ತೊಂದರೆಯುಳ್ಳವರು, ಆರ್ಥಿಕ ಸಮಸ್ಯೆಗಳಿಂದ ಒತ್ತಡಕ್ಕೊಳಗಾದವರು ಇನ್ನು ಮುಂತಾದವರು ಉಚಿತ ಸಹಾಯವಾಣಿ 14416 ಸಂಖ್ಯೆಗೆ ಗೆ ಕರೆ ಮಾಡಿ ಸೂಕ್ತ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನೆಯನ್ನು ಪಡೆದು ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಎಂದು ತಿಳಿಸಿದರು.


ಈ ಸಂದÀರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಅರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಈ.ರಮೇಶ್ ಬಾಬು, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಮಲೇರಿಯಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ಡಾ.ಆರ್.ಅಬ್ದುಲ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾ ಅನುಷ್ಟಾನ ಅಧಿಕಾರಿ ಡಾ.ಮರಿಯಂಬಿ, ತಾಲೂಕು ಆರೋಗ್ಯ ಆಧಿಕಾರಿ ಡಾ.ಮೋಹನ್ ಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಶಾಂತ ಕುಮಾರ್, ಕೆ.ಪಿ.ಕಾವ್ಯ, ರಂಜಿತ, ತಂಗಿಯಮ್ಮ, ಪ್ರಹ್ಲಾದ ರೆಡ್ಡಿ, ಮಾನಪ್ಪ, ಗಂಗಾಧರ್, ನಿರಂಜನ್, ರಮೇಶ್ ಬಾಬು, ರಾಮು ಸೇರಿದಂತೆ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಆಶಾ ಕಾರ್ಯಕರ್ತರು, ಇತರರು ಉಪಸ್ಥಿತರಿದ್ದರು.
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾವು ಮಾಹಿತಿ ಫಲಕಗಳ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.

LEAVE A REPLY

Please enter your comment!
Please enter your name here