BP NEWS: ಬಳ್ಳಾರಿ: ಸೆಪ್ಟೆಂಬರ್.08:
ವಿಶ್ವ ಕರ್ಮ ಜಯಂತಿಯನ್ನು ಸೆಪ್ಟೆಂಬರ್ 17 ರಂದು ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ಅವರು ಹೇಳಿದರು.
ಶುಕ್ರವಾರದಂದು, ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶ್ವ ಕರ್ಮ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸೆಪ್ಟೆಂಬರ್ 17 ರಂದು ಬೆಳಿಗ್ಗೆ 11.30ಕ್ಕೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನ ವೇದಿಕೆ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಸಂಘ ಸಂಸ್ಥೆಯ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
ಅಂದು ಬೆಳಿಗ್ಗೆ ವಿಶ್ವಕರ್ಮ ಜಯಂತಿ ಅಂಗವಾಗಿ ನಗರದ ಕಾಳಿಕಾ ಕಮ್ಮಟೇಶ್ವರ ದೇವಸ್ಥಾನದಿಂದ ಬೆಂಗಳೂರು ರಸ್ತೆಯ ಹಳೆ ಬ್ರೂಸ್‍ಪೇಟೆ ಪೋಲಿಸ್ ಠಾಣೆ ಮುಂಭಾಗದಿಂದ ತೇರು ಬಜಾರ್ ಮೂಲಕ ಹೆಚ್.ಆರ್ ಗವಿಯಪ್ಪ ವೃತ್ತದಿಂದ ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಬಿಡಿಎಎ ಫುಟ್‍ಬಾಲ್ ಮೈದಾನದ ವೇದಿಕೆ ಸಭಾಂಗದವರೆಗೆ ನಡೆಯಲಿದೆ. ವಿಶ್ವ ಕರ್ಮ ಜಯಂತಿಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ಮತ್ತು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿಶ್ವಕರ್ಮ ಜಂತ್ಯೋತ್ಸವವನ್ನು ಆಚರಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಅವರ ಬಗ್ಗೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸಬೇಕು ಎಂದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.