ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಶಿಕ್ಷಕರ ದಿನಾಚರಣೆ

0
72

BP NEWS: ಬಳ್ಳಾರಿ: ಸೆಪ್ಟೆಂಬರ್.06:
ವಿಷಯ ಪ್ರೀತಿ, ವೃತ್ತಿ ಗೌರವ ಮತ್ತು ಸ್ನೇಹ ಮನೋಭಾವಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಶಿಕ್ಷಕರಾಗಬಹುದು ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಸಾಹೇಬ್ ಅಲಿ ಹೆಚ್ ನಿರಗುಡಿ ಅವರು ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕದಿಂದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ “ಶಿಕ್ಷಣದ ಚೇತರಿಕೆಯ ಹೃದಯಭಾಗದಲ್ಲಿರುವ ಶಿಕ್ಷಕರು” ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕರಾದವರ ಕೆಲಸ ಕೇವಲ ಶಿಕ್ಷಣ ನೀಡುವದಲ್ಲ, ಸದೃಢ ಸಮಾಜ ನಿರ್ಮಾಣಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡಿದ, ನಮ್ಮ ಜೀವನದ ಮೇಲೆ ಮಹತ್ವದ ಪ್ರಭಾವ ಬೀರಿದ ಮತ್ತು ಉತ್ಕøಷ್ಟತೆಗೆ ನಮ್ಮನ್ನು ಪ್ರೇರೀಪಿಸಿದ ಎಲ್ಲಾ ಶಿಕ್ಷಕರಿಗೆ ಈ ಮೂಲಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು.


ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಸಿ.ಪಾಟೀಲ್ ಅವರು ಮಾತನಾಡಿ, ಗುರು ಎಂದರೆ ಗುರುತರವಾದ ಜವಾಬ್ದಾರಿಗೆ ಹೆಗಲು ಕೊಟ್ಟು ಹೋರುತ್ತಾರೋ ಅವರೇ ನಿಜವಾದ ಗುರು. ವಿದ್ಯೆಯ ಜೊತೆಗೆ ಸಂಸ್ಕಾರ ಇದ್ದರೆ ಉತ್ತಮ ಪ್ರಜೆಯಗುತ್ತಾನೆ ಇದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಕರಿಗೆ ಪ್ರಶ್ನೆ ಕೇಳುವ ಗುಣವನ್ನು ಬೆಳೆಸಿಕೊಳ್ಳಬೇಕು, ಆಗ ಮಾತ್ರ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಒದಗಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 10ಕ್ಕು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸಿ ಗೆದ್ದ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್ ಓಲೇಕಾರ್, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಡಾ.ಗೌರಿ ಮಾಣಿಕ್ ಮಾನಸ್, ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here