BP NEWS: ಬಳ್ಳಾರಿ: ಆಗಸ್ಟ್.28:
ರಾಜ್ಯ ಸರ್ಕಾರವು ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯು ಜಾರಿಗೊಂಡು, ಇದೀಗ ರಾಜ್ಯಾದ್ಯಂತ ಜನರ ಮನೆ-ಮನಗಳನ್ನು ಬೆಳಗುವ ಮೂಲಕ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಿದೆ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೃಹಜ್ಯೋತಿ ಯೋಜನೆಗೆ ನೊಂದಣಿ ಕಾರ್ಯಕ್ಕೆ ಜೂನ್ 18ರಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‍ವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಕಾರ್ಯಕ್ರಮದ ನೋಂದಣಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಾದ್ಯಂತ ಜೂನ್ 18 ರಿಂದ ಕರ್ನಾಟಕ ಒನ್, ಗ್ರಾಮಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ನೋಂದಣಿ ನಡೆಯುತ್ತಿದೆ. ಅಲ್ಲದೆ ಸಾರ್ವಜನಿಕರು ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಆಯಾ ವಿದ್ಯುತ್ ಕಂಪನಿಗಳು ಕೂಡ ಅಂತರ್ಜಾಲದಲ್ಲಿ ಹೊಸ ಪೆÇೀರ್ಟಲ್ ತೆರೆದು, ಅನುಕೂಲ ಮಾಡಿಕೊಟ್ಟಿದೆ. ಇದರ ಜೊತೆಗೆ ಫಲಾನುಭವಿಗಳು ತಮ್ಮ ಮೊಬೈಲ್‍ನಲ್ಲಿಯೇ ನೊಂದಣಿ ಮಾಡಿಕೊಳ್ಳಲು ಅನುವಾಗುವಂತೆ ಸರಳೀಕರಣ ಮಾಡಲಾಗಿದೆ.
*ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯಡಿ ನೊಂದಣಿ ಮಾಹಿತಿ:*
ಬಳ್ಳಾರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 2,37,427 ಮಂದಿ ನೊಂದಣಿ ಮಾಡಿಕೊಂಡ ಫಲಾನುಭವಿಗಳಾಗಿದ್ದು, ಅದರಲ್ಲಿ 1,56,418 ಜನ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಬಳ್ಳಾರಿ ಜೆಸ್ಕಾಂ ಇಲಾಖೆಯು ತಿಳಿಸಿದೆ.
*ಗೃಹ ಜ್ಯೋತಿ ನೋಂದಣಿಗೆ ಬೇಕಿರುವ ದಾಖಲೆಗಳು:*
ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯು ತುಂಬಾ ಸರಳವಾಗಿದ್ದು, ಸೇವಾಸಿಂಧು (https://sevasindhugs.karnataka.gov.in) ಪೆÇೀರ್ಟಲ್‍ನಲ್ಲಿ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸುವ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು. ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವನ್ನು ವಿಧಿಸಲಾಗಿಲ್ಲ. ಆದ್ದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ.
*ಗೃಹಜ್ಯೋತಿ ಯೋಜನೆಯ ಸಹಾಯವಾಣಿ ಸಂಖ್ಯೆ:*
‘ಗೃಹಜ್ಯೋತಿ’ ಯೋಜನೆಗೆ ಜನರು ಅರ್ಜಿಗಳನ್ನು ಸಲ್ಲಿಕೆ ಮಾಡುವಾಗ ತಾಂತ್ರಿಕ ಸಮಸ್ಯೆಗಳು ಎದುರಾದರೆ ಹೆಚ್ಚಿನ ಮಾಹಿತಿಗಾಗಿ ವಿದ್ಯುಚ್ಛಕ್ತಿ ಕಚೇರಿ ಅಥವಾ 24*7 ಸಹಾಯವಾಣಿ ಸಂಖ್ಯೆ 1912 ಗೆ ಕರೆಮಾಡಬಹುದಾಗಿದೆ.
*ಅರ್ಜಿ ಹಾಕಿರುವವರಿಗೆ ಆಗಸ್ಟ್‍ನಲ್ಲಿ ನೀಡುವ ಕರೆಂಟ್ ಬಿಲ್ ಶೂನ್ಯ:*
ಜುಲೈ 1ರಿಂದಲೇ ಗೃಹ ಜ್ಯೋತಿ ಉಚಿತ ವಿದ್ಯುತ್ ಸೌಲಭ್ಯ ಆರಂಭವಾಗಿದೆ. ಈಗಾಗಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿರುವವರು ಮಾಸಿಕ ಸರಾಸರಿಯಂತೆಯೇ ವಿದ್ಯುತ್ ಬಳಕೆ ಮಾಡಿದ್ದರೆ ಜುಲೈ ತಿಂಗಳ ಬಳಸಿದ್ದಕ್ಕೆ ಆಗಸ್ಟ್‍ನಲ್ಲಿ ನೀಡುವ ಬಿಲ್‍ನ ಮೊತ್ತ ಶೂನ್ಯವಾಗಿರಲಿದೆ.
*ಹೆಚ್ಚುವರಿ ಬಳಸಿದ್ದರೆ ಹಣ ಪಾವತಿಸಬೇಕು:*
ಗ್ರಾಹಕರು ಮಾಸಿಕ ಸರಾಸರಿಗಿಂತ ಹೆಚ್ಚುವರಿ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದರೆ ಆ ಹೆಚ್ಚುವರಿ ಬಳಕೆ ಶುಲ್ಕ ಪಾವತಿಸಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಮನೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮಾಸಿಕ ಸರಾಸರಿ 60 ಯುನಿಟ್ ವಿದ್ಯುತ್ ಬಳಸುತ್ತಿದ್ದರೆ, ಅದಕ್ಕೆ ಶೇ.10 ಸೇರಿ 66 ಯುನಿಟ್ ಉಚಿತವಾಗಿ ಲಭ್ಯವಾಗಲಿದೆ. ಜುಲೈ ತಿಂಗಳಲ್ಲಿ ನಿಮ್ಮ ಮನೆಯಲ್ಲಿ 70 ಯುನಿಟ್ ಬಳಸಿದ್ದರೆ ಮೇಲಿನ ನಾಲ್ಕು ಯುನಿಟ್‍ಗೆ ಹಣ ಪಾವತಿಸಬೇಕಾಗುತ್ತದೆ.