BP NEWS: ಬಳ್ಳಾರಿ: ಆಗಸ್ಟ್.27:
ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಮಹಾತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯು ಆ.30ರಂದು ರಾಜ್ಯ ಮಟ್ಟದ ಚಾಲನೆ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮವನ್ನು ಮಹಾನಗರಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್‍ನ ವಾರ್ಡ್ ಮಟ್ಟದಲ್ಲಿ ಹಾಗೂ ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಲ್.ಇ.ಡಿ ಅಥವಾ ಪೆÇ್ರಜೆಕ್ಟರ್ ಪರದೆಯ ಮೂಲಕ ಮಹಿಳೆಯರು ವೀಕ್ಷಣೆ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಯುವ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುಷ್ಟಾನ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮನೆಯ ಯಜಮಾನಿಯು ಕಾರ್ಯಕ್ರಮದ ದಿನದಂದು ಅವರ ಮನೆಯ ಮುಂದೆ ರಂಗೋಲಿ ಹಾಕಬೇಕು. ಮನೆಯ ಮುಂದೆ ರಂಗೋಲಿಯಲ್ಲಿ ‘ನಾನು ಗೃಹಲಕ್ಷ್ಮಿ, ಮನೆಯ ಯಜಮಾನಿ’ ಎಂದು ಬರೆಯುವಂತೆ ಮನವಿ ಮಾಡಿದ ಸಚಿವರು, ಒಟ್ಟಾರೆಯಾಗಿ ಗ್ರಾಮಗಳಲ್ಲಿ ಹಬ್ಬದ ವಾತವರಣ ಮೂಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯು ಪ್ರಾರಂಭದಿಂದ (20-07-23) ಇಲ್ಲಿಯವರೆಗೆ (27-08-2023) 3,01,180 ಫಲಾನುಭವಿಗಳ ಪೈಕಿ 2,59,161 (ಶೇ.86.05) ಫಲಾನುಭವಿಗಳು ನೊಂದಾಯಿಸಿಕೊಂಡಿದ್ದು, 42,019 ಅರ್ಜಿ ಸಲ್ಲಿಸಲು ಬಾಕಿಯಿರುತ್ತದೆ. ಈ ಪೈಕಿ ನೊಂದಣಿಯಲ್ಲಿ ಜಿಲ್ಲೆಯು ಐದನೇ ಸ್ಥಾನದಲ್ಲಿದೆ. ಕೂಡಲೇ ಅರ್ಹರು ಹತ್ತಿರದ ಗ್ರಾಮ ಒನ್,ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ತಾಲೂಕುವಾರು ಅಂಕಿ-ಅಂಶ:
ಫಲಾನುಭವಿಗಳ ಗುರಿ: ಬಳ್ಳಾರಿ ನಗರ-77,945., ಬಳ್ಳಾರಿ ಗ್ರಾಮೀಣ-50,488., ಕುರುಗೋಡು-26,495., ಕಂಪ್ಲಿ-30,050., ಸಿರುಗುಪ್ಪ-64,350., ಸಂಡೂರು-51,852., ಒಟ್ಟು 3,01,180.
ನೊಂದಣಿಯಾದ ಫಲಾನುಭವಿಗಳ ಸಂಖ್ಯೆ: ಬಳ್ಳಾರಿ ನಗರ-69,089 (ಶೇ.88.64), ಬಳ್ಳಾರಿ ಗ್ರಾಮೀಣ-42,406(ಶೇ.83.99), ಕುರುಗೋಡು-24,926 (ಶೇ.94.08), ಕಂಪ್ಲಿ-24,137(ಶೇ.80.32), ಸಿರುಗುಪ್ಪ-55,372(ಶೇ.86.05), ಸಂಡೂರು-43,231(ಶೇ. 83.37), ಒಟ್ಟು 2,59,161 (ಶೇ. 86.05).
101 ಕಡೆ ನೇರ ಪ್ರಸಾರ ವ್ಯವಸ್ಥೆ:
ಆ.30 ರಂದು ಮೈಸೂರಿನಲ್ಲಿ ನಡೆಯುವ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆ ಸಮಾರಂಭದ ನೇರ ಪ್ರಸಾರದ ಕಾರ್ಯಕ್ರಮ ವೀಕ್ಷಿಸಲು ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟ ಗ್ರಾಮ ಪಂಚಾಯತ್ ಮಟ್ಟ ಸೇರಿದಂತೆ 101 ಕಡೆ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಬಳ್ಳಾರಿ ನಗರದಲ್ಲಿ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಮೈದಾನ, ಜಿಲ್ಲಾ ಕ್ರೀಡಾಂಗಣ ರಸ್ತೆಯ ವಾಲ್ಮೀಕಿ ಭವನ ಹಾಗೂ ಬಳ್ಳಾರಿ ಗ್ರಾಮಾಂತರದಲ್ಲಿ ಕುಡುತಿನಿ ಪಟ್ಟಣ ಪಂಚಾಯತ್ ಹಾಗೂ 25 ಪಂಚಾಯತ್ ಕೇಂದ್ರ ಸ್ಥಾನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಡೂರು ತಾಲೂಕಿನ ಆದರ್ಶ ಕಲ್ಯಾಣ ಮಂಟಪ ಹಾಗೂ ಕುರೇಕುಪ್ಪ ಪುರಸಭೆಯ ಶ್ರೀ ಆಂಜನೇಯ ದೇವಸ್ಥಾನ ಮತ್ತು 26 ಪಂಚಾಯತ್ ಕೇಂದ್ರ ಸ್ಥಾನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸಿರುಗುಪ್ಪ ತಾಲೂಕಿನ ಬಾಲಾಜಿ ಚಿತ್ರಮಂದಿರ, ಕಾಡಸಿದ್ದೇಶ್ವರ ದೇವಸ್ಥಾನ ಹಾಗೂ ತೆಕ್ಕಲಕೋಟೆಯ 3ನೇ ವಾರ್ಡ್ ಪಕ್ಕಿರ ಮಸೀದಿ ಹತ್ತಿರ ಮತ್ತು 27 ಪಂಚಾಯತ್ ಕೇಂದ್ರ ಸ್ಥಾನಗಳಲ್ಲಿ, ಕುರುಗೋಡು ತಾಲೂಕಿನ ಎಸ್.ವಿ.ಕಲ್ಯಾಣ ಮಂಟಪ ಹಾಗೂ 12 ಪಂಚಾಯತ್ ಕೇಂದ್ರ ಸ್ಥಾನಗಳಲ್ಲಿ, ಕಂಪ್ಲಿ ತಾಲೂಕಿನ ಪುರಸಭೆ ಭವನ ಹಾಗೂ 20ನೇ ವಾರ್ಡ್ ಮಾರುತಿನಗರ ಮತ್ತು 11 ಪಂಚಾಯತ್ ಕೇಂದ್ರ ಸ್ಥಾನಗಳಲ್ಲಿ ವೀಕ್ಷಣೆ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಸ್ಥಳೀಯ ಕಾರ್ಯಕ್ರಮದಲ್ಲಿ ಕನಿಷ್ಟ 2000 ಫಲಾನುಭವಿಗಳು ಭಾಗವಹಿಸುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಕಾರ್ಯಕ್ರಮದ ಸ್ಥಳದಲ್ಲಿ ಒಂದು ಎಲ್.ಇ.ಡಿ ಟಿ.ವಿ ಅಥವಾ ಒಂದು 10*10 ಅಳತೆಯ ಎಲ್.ಇ.ಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ಟಿ.ವಿ.ಯಲ್ಲಿ ಮೈಸೂರು ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರವನ್ನು ಪ್ರದರ್ಶಿಸಲಾಗುವುದು. ಹಾಗೂ ಎಲ್.ಇ.ಡಿ ಪರದೆಯಲ್ಲಿ ಮೈಸೂರು ಕಾರ್ಯಕ್ರಮದ ಸ್ಥಳದಿಂದ ಸ್ಥಳೀಯ ಕಾರ್ಯಕ್ರಮದ ಸ್ಥಳದೊಂದಿಗೆ ಪರಸ್ಪರ ಸಂವಾದ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮ ನಡೆಸುವ ಸ್ಥಳಗಳಲ್ಲಿ ಪೂರ್ವಭಾವಿಯಾಗಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸ್ಥಳ/ಕಟ್ಟಡ (ಸಮುದಾಯ ಭವನ, ಶಾಲೆ, ಕಲ್ಯಾಣ ಮಂಟಪ ಇತ್ಯಾದಿ), ಟಿ.ವಿ ವ್ಯವಸ್ಥೆ, ಎಲ್.ಇ.ಡಿ/ಪೆÇ್ರಜೆಕ್ಟರ್ ವ್ಯವಸ್ಥೆ, ಮೈಕ್ ವ್ಯವಸ್ಥೆ, ಹಾಸನಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಬ್ಯಾನರ್, ಲ್ಯಾಪ್ ಟ್ಯಾಪ್ ಅಂತರ್ಜಾಲ ವ್ಯವಸ್ಥೆ (ಇಂಟರ್ ನೆಟ್), ಛಾಯಾಗ್ರಹಣ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಟೀ-ಬಿಸ್ಕೆಟ್ ಹಾಗೂ ಉಪಹಾರ ವ್ಯವಸ್ಥೆ, ವಿದ್ಯುತ್‍ಚ್ಛಕ್ತಿ ವ್ಯವಸ್ಥೆ (ಯು.ಪಿ.ಎಸ್/ಜನರೇಟರ್), ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ತ್ರಿವೇಣಿ, ಉಪಮೇಯರ್ ಜಾನಕಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.