ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಆ್ಯಂಟಿ ರ್ಯಾಗಿಂಗ್ ಕಾರ್ಯಕ್ರಮ

0
78

BP NEWS: ಬಳ್ಳಾರಿ: ಆಗಸ್ಟ್.24:
ಆ್ಯಂಟಿ ರ್ಯಾಗಿಂಗ್ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲ್ಲಾ ಹಂತಗಳಲ್ಲಿ ಕಾಣುವಂತಹುದ್ದು, ರ್ಯಾಗಿಂಗ್‍ಗೆ ಒಳಗಾದಂತಹ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಯಿಂದ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಆತ್ಮಹತ್ಯೆಯಂತಹ ವಿಪರೀತ ಪ್ರಕರಣಗಳು ನಮಗೆ ನಿದೇರ್ಶನಗಳಿವೆ ಎಂದು ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕುಮಾರ.ಎಸ್ ಅವರು ಹೇಳಿದರು.
ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ ಆ್ಯಂಟಿ ರ್ಯಾಗಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲ ಬದಲಾದಂತೆಲ್ಲ ರ್ಯಾಗಿಂಗ್ ಸ್ವರೂಪ ಬದಲಾಗುತ್ತಿದೆ ಹಾಗೂ ವಿದ್ಯಾರ್ಥಿಗಳಲ್ಲಿ ಸಹಿಷ್ಣತೆ, ಶಕ್ತ್ತಿ, ತಾಳ್ಮೆ ಕಡಿಮೆಯಾಗುತ್ತಿದೆ. ಕೆಲವೊಮ್ಮೆ ಸಣ್ಣ ಪ್ರಮಾಣದ ಘಟನೆಗಳಿಗೆ ತೀವ್ರ ಪ್ರಮಾಣ ಪ್ರತಿಕ್ರಿಯೆ ನೀಡಿ ಅನಾಹುತಗಳು ಸಂಭವಿಸುತ್ತಿವೆ ಎಂದು ತಿಳಿಸಿದರು.
ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿಜಯಕುಮಾರ ಬಿ.ಮಲಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರ್ಯಾಗಿಂಗ್‍ನಂತಹ ಘಟನೆಗಳಲ್ಲಿ ಭಾಗವಹಿಸುವುದು, ಸಹಕರಿಸುವುದು ಮತ್ತು ಸಹಿಸುವುದು ಕೂಡ ಅಪರಾಧವಾಗಿದೆ ಎಂದು ತಿಳಿಸಿದರು.
ಮಕ್ಕಳು ಮುಕ್ತವಾಗಿ ಬೇರೆಯವರೊಡನೆ ಅಂತಹ ಘಟನೆಗಳ ಬಗ್ಗೆ ತಿಳಿಸಬೇಕು ಅದರಿಂದ ಮಾನಸಿಕ ಖಿನ್ನತೆಗಳಿಂದ ಅಪಾಯಗಳನ್ನು ತಪ್ಪಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಡಾ.ನಾಗಭೂಷಣ ವಿ.ಚರಂತಿಮಠ, ಡಾ.ಶಾಶಿಕಂತ ಮಜ್ಜಗಿ, ಕು.ಸ್ನೇಹ ಸುಮಾ ಹೆಗಡೆ, ಡಾ.ರಾಬಿಯಾ ಬೇಗಂ ಸೇರಿದಂತೆ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here