ಬಳ್ಳಾರಿಯಲ್ಲಿ ಸಂಭ್ರಮದ ಡಿ.ದೇವರಾಜು ಅರಸು ಅವರ 108ನೇ ಜನ್ಮ ದಿನ ಆಚರಣೆ

0
76

BP NEWS: ಬಳ್ಳಾರಿ: ಆಗಸ್ಟ್.20:
ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ನೇತಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರು ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಅವರ ಸಮಾಜಮುಖೀ ಕೆಲಸಗಳು, ಪ್ರಗತಿಪರ ಯೋಜನೆಗಳು ಅವಿಸ್ಮರಣೀಯ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ನಗರದ ಡಾ.ರಾಜ್ ಕುಮಾರ್ ರಸ್ತೆಯ ಬಿಡಿಎಎ ಫುಟ್ ಬಾಲ್ ಮೈದಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಮತ್ತು ಆ ಸಮುದಾಯಗಳ ಮೀಸಲಾತಿ, ಶಿಕ್ಷಣ, ಸಾಮಾಜಿಕ ಪರಿವರ್ತನೆಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ನಾಯಕರಾಗಿದ್ದರು ಎಂದರು.
ಭೂಸುಧಾರಣೆ ಕಾಯ್ದೆ,ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ರೂಪಿಸಿದ ಅನೇಕ ಯೋಜನೆಗಳು, ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಕರಣ ಸೇರಿದಂತೆ ಅನೇಕ ವಿಶಿಷ್ಟ ಮತ್ತು ಪರಿಣಾಮಕಾರಿಯಾದ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಇಡೀ ದೇಶದಲ್ಲಿಯೇ ಅರಸು ಅವರು ಶ್ರೇಷ್ಠ ಮತ್ತು ಜನಪ್ರಿಯ ಮುಖ್ಯಮಂತ್ರಿಗಳೆಂದು ಹೆಸರಾಗಿದ್ದರು ಎಂದು ಹೇಳಿದರು.
ಅರಸು ಅವರು, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿಲಯಗಳ ಪರಿಕಲ್ಪನೆಯನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ. ಸಮಾಜಕ್ಕೆ ಅವರ ಕೊಡುಗೆಗಳು ಅಪಾರ. ಇಂತಹ ಆದರ್ಶ ವ್ಯಕ್ತಿಗಳು ನಮಗೆ ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಮಾತನಾಡಿ, ಡಿ.ದೇವರಾಜು ಅರಸು ಅವರು, ಭೂ ಸುಧಾರಣಾ ಕಾಯ್ದೆ, ಕೇಂದ್ರ ಸರ್ಕಾರದ 20 ಅಂಶಗಳ ಯೋಜನೆ ಹಾಗೂ ಗಾಂಧೀಜಿಯವರ ‘ಉಳುವವನೇ ಭೂಮಿ ಒಡೆಯ’ ಪರಿಕಲ್ಪನೆಯನ್ನು ಜಾರಿಗೊಳಿಸಿದವರು. ಕೂಲಿಗಾಗಿ ಉಳುಮೆ ಮಾಡುತ್ತಿದ್ದ ಭೂ ರಹಿತರಿಗೆ ಭೂಮಿಯನ್ನು ನೀಡಿದವರು ಎಂದು ತಿಳಿಸಿದರು.
ಕರ್ನಾಟಕ ಪ್ರದೇಶ ದೇವರಾಜು ಅರಸು ವೇದಿಕೆ ಅಧ್ಯಕ್ಷ ಕಲ್ಲುಕಂಭ ಪಂಪಾಪತಿ ಅವರು ಡಾ.ದೇವರಾಜು ಅರಸು ಕುರಿತು ವಿಶೇಷ ಉಪನ್ಯಾಸ ನೀಡಿ, ಅಂಬೇಡ್ಕರ್ ದಲಿತರಿಗೆ ಧ್ವನಿಯಾದರೆ, ಅರಸು ದುರ್ಬಲ ವರ್ಗದವರ ಏಳ್ಗೆಗಾಗಿ ಧ್ವನಿಯಾದವರು. ಹಲವು ರಾಜಕಾರಣಿಗಳು ಆಯಾ ಜಾತಿಯ ನಾಯಕರಾಗಿ ಅವರ ವರ್ಗಕ್ಕೆ ಮಾತ್ರ ದುಡಿಯುವುದನ್ನು ಕಾಣುತ್ತೇವೆ. ಆದರೆ ಅರಸು ಯಾವುದೇ ಜಾತಿಯ ನಾಯಕರಾಗದೆ ಎಲ್ಲ ವರ್ಗದವರ ಏಳಿಗೆಗಾಗಿ ಶ್ರಮಿಸಿದರು ಎಂದು ಸ್ಮರಿಸಿದರು.


ವಿದ್ಯಾರ್ಥಿಗಳು ಎಲ್ಲಾ ಕೋರ್ಸ್ ಗಳಿಗೂ ಆದ್ಯತೆ ನೀಡಬೇಕು. ಇಲಾಖೆಯಿಂದ ವಿದೇಶಿ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ, ಅರಿವು ಶೈಕ್ಷಣಿಕ ಸಾಲದಂತಹ ಹಲವಾರು ಯೋಜನೆಗಳಿದ್ದು, ವಿದ್ಯಾರ್ಥಿಗಳು ಇವುಗಳನ್ನು ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಇಂಜಿನಿಯರಿಂಗ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಇಇ ವಿಭಾಗದಲ್ಲಿ 7 ಚಿನ್ನದ ಪದಕ ಪಡೆದ ಬಳ್ಳಾರಿಯ ವಿದ್ಯಾರ್ಥಿ ಸಂಪತ್ ಕುಮಾರ್ ಅವರನ್ನು ಗಣ್ಯರು ಸೇರಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯ ವಿದ್ಯಾರ್ಥಿ ನಿಲಯದ ಅತಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಜಾನಕಿ, ಪಾಲಿಕೆಯ ಮಾಜಿ ಮೇಯರ್ ಎಂ.ರಾಜೇಶ್ವರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಆರ್.ಸುರೇಶ್‍ಬಾಬು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಶಿವಾಜಿ ರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೊಟ್ರಪ್ಪ ಸೇರಿದಂತೆ ಹಿಂದುಳಿದ ವರ್ಗಗಳ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಇಲಾಖೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here