BP NEWS: ಬಳ್ಳಾರಿ: ಆಗಸ್ಟ್.05:
ಮುಂಡರಗಿ ಆಶ್ರಯ ಯೋಜನೆಯು ಬಳ್ಳಾರಿ ನಗರ ಬಡಜನರ ಕನಸಿನ ಸೂರಾಗಿದ್ದು, ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಬಾರದು. ಪುನಾರಂಭಿಸಲು ಬೇಕಾದ ಅಗತ್ಯ ಅನುದಾನ ಮತ್ತು ಇತರೆ ಸೌಲಭ್ಯಗಳು ಒದಗಿಸಲಾಗುವುದು ಎಂದು ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಅವರು ಶನಿವಾರದಂದು ಮಿಂಚೇರಿ ರಸ್ತೆಯ ಮುಂಡರಗಿ ಆಶ್ರಯ ವಸತಿ ಯೋಜನೆಗಳ ಮನೆ ನಿರ್ಮಾಣ ಕಾಮಗಾರಿಗಳ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ಮುಂಡರಗಿ ಆಶ್ರಯ ವಸತಿ ಯೋಜನೆ ಅಡಿಯ ಮನೆಗಳನ್ನು ತುರ್ತಾಗಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಬೇಕು. ಹೆಚ್ಚುವರಿ ಹಣವನ್ನು ಚರ್ಚಿಸಿ ಸರಕಾರದಿಂದ ಒದಗಿಸಿಕೊಡಲಾಗುವುದು ಎಂದರು.
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರಕಾರದ ರೂ.371ಕೋಟಿ ವೆಚ್ಚದಲ್ಲಿ 58.50 ಎಕರೆಯಲ್ಲಿ 5616 ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಎನ್ ಸಿಸಿ ಕಂಪನಿಗೆ ಕಾಮಗಾರಿಯ ಹೊಣೆ ವಹಿಸಲಾಗಿದ್ದು, ಕಾಮಗಾರಿ ಪುನಃ ಆರಂಭಿಸಬೇಕು. ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತವಾಗಿ ಅನುದಾನ ಒದಗಿಸಲಾಗುವುದು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈಗಾಗಲೇ 4291 ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದ್ದು, ಇದರಲ್ಲಿ 2533 ಫಲಾನುಭವಿಗಳು ಹಣ ಪಾವತಿ ಮಾಡಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಹೇಳಿದರು.
ಪ್ರಸ್ತುತ ಮುಂಡರಗಿ ಆಶ್ರಯ ಬಡಾವಣೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ ಹಾಗೂ ವಿದ್ಯುದ್ದಿಕರಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರ ಗಮನಕ್ಕೆ ತಂದರು.
ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು. ಈ ಕುರಿತು ರಾಜಿಯಾಗುವ ಸಂದೇಹವಿಲ್ಲ ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಮುಂಡರಗಿ ಆಶ್ರಯ ವಸತಿ ಬಡಾವಣೆಯ ಪ್ರಗತಿಗೆ ಸಂಬಂಧಿಸಿದ ಇನ್ನೀತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಇನ್ನೀತರರು ಇದ್ದರು.