ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಶಕ್ತಿ ಯೋಜನೆಯಿಂದ ಮಹಿಳೆಯರ ಉತ್ತೇಜನಕ್ಕೆ ಹೆಚ್ಚು ಶಕ್ತಿ: ಸಚಿವ ಬಿ.ನಾಗೇಂದ್ರ

0
285

BP NEWS: ಬಳ್ಳಾರಿ: ಜೂನ್.11:
ದುಡಿಯುವ ಬಡವರ್ಗದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಲು ನೂತನ ಸರಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯು ಮಹಿಳೆಯರಿಗೆ ಇನ್ನಷ್ಟು ಶಕ್ತಿ ತುಂಬಲಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.
ಅವರು ಭಾನುವಾರ, ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದಿಂದ ರಾಜ್ಯಾದಾದ್ಯಂತ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣ ಸೌಲಭ್ಯವನ್ನು ಒದಗಿಸುವ ‘ಶಕ್ತಿ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹೆಣ್ಣು ಕುಟುಂಬದ ಕಣ್ಣಾಗಿದ್ದು, ತನ್ನ ಕುಟುಂಬದ ಪೆÇೀಷಣೆಗಾಗಿ ಸಣ್ಣ ವ್ಯಾಪಾರ-ವಹಿವಾಟುಗಳಿಗೆ ನಗರಕ್ಕೆ ಮುಖಮಾಡಿ ಬರುವಾಗ ಅವಳ ಪ್ರಯಾಣದ ಖರ್ಚು ತನ್ನ ಆದಾಯದ ಅರ್ಧದಷ್ಟಾಗುತ್ತದೆ. ತಮ್ಮ ವ್ಯಾಪಾರ ವಹಿವಾಟು ನಡೆಸಲು ಅದರ ಭಾರವನ್ನು ಹೊರೆಯಾಗದಂತೆ ನಿರ್ವಹಿಸಲು ಈ ಯೋಜನೆಯು ಸಹಕಾರಿಯಾಗಲಿದೆ ಎಂದು ಹೇಳಿದರು.


ಇಂದು ರಾಜ್ಯಾದ್ಯಂತ ಮಹಿಳೆಯರ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ. ಈ ಯೋಜನೆಯಡಿ ಆರು ವರ್ಷ ಮೇಲ್ಪಟ್ಟ ಎಲ್ಲಾ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಬಹುದು ಎಂದರು.
ಮಹಿಳೆಯರು ರಾಜ್ಯದೊಳಗೆ 4 ಸಾರಿಗೆ ನಿಗಮಗಳ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆ ಬಸ್‍ಗಳಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಪ್ರತಿಷ್ಠಿತ ಬಸ್ ಸೇರಿದಂತೆ ಹೊರ ರಾಜ್ಯಗಳಿಗೆ ಸಂಚಾರ ಮಾಡುವ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಶಕ್ತಿ ಯೋಜನೆ ದಿಟ್ಟ ಹೆಜ್ಜೆ ಎಂದೇ ಬಿಂಬಿಸಲಾಗುತ್ತಿದೆ ಎಂದು ಹೇಳಿದರು
ಉಚಿತ ಪ್ರಯಾಣಕ್ಕೆ ಗುರುತಿನ ಚೀಟಿ ಪ್ರದರ್ಶನ ಕಡ್ಡಾಯ: ಸಾರಿಗೆ ಸಂಸ್ಥೆಗಳು ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್, ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ನೀಡಿರುವ ವಾಸಸ್ಥಳದ ಗುರುತಿನ ಚೀಟಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ ನೀಡಿರುವ ಗುರುತಿನ ಚೀಟಿ ಇವುಗಳಲ್ಲಿ ಒಂದು ದಾಖಲೆ ತೋರಿಸಿ ಶೂನ್ಯ ಮೊತ್ತದ ಟಿಕೇಟ್ ಪಡೆದು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ತಿಳಿಸಿದರು.


ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ: ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಅಧಿಕಾರಿ ವರ್ಗದವರು ಜೊತೆಗೂಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಪಣತೊಡೋಣ ಹಾಗೂ ಜಿಲ್ಲೆಯನ್ನು ಭ್ರಷ್ಟಚಾರ ಮುಕ್ತವನ್ನಾಗಿ ಮಾಡೋಣ ಎಂದು ಹೇಳಿದರು.
ರಾಜ್ಯದಲ್ಲಿ ಯುವಜನತೆಯ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ದುಶ್ಚಟಕ್ಕೆ ಒಳಗಾದ ಯುವಜನತೆಯನ್ನು ಮುಖ್ಯವಾಹಿನಿಗೆ ತರಲು ಕಾರ್ಯ ಕೈಗೊಳ್ಳಲಾಗುವುದು ಎಂದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಹಲವರು ಟೀಕೆ-ಟಿಪ್ಪಣಿ ಮಾಡಿದ್ದರು. ಆದರೆ ರಾಜ್ಯ ಸರಕಾರವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲ ಹಂತವಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಹಂತ-ಹಂತವಾಗಿ ಇನ್ನುಳಿದ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಸರಕಾರವು ಮುಂದಿನ ದಿನಗಳಲ್ಲಿ ಶಕ್ತಿ ಯೋಜನೆಗೆ ಸ್ಮಾರ್ಟ್‍ಕಾರ್ಡ್‍ಗಳನ್ನು ಜಾರಿಗೊಳಿಸಲಿದ್ದು, ಅವುಗಳನ್ನು ಪಡೆಯಲು ನಗರ ನಿವಾಸಿಗಳು ಅಲೆಯಬೇಕಿಲ್ಲ, ಎಲ್ಲ ಅರ್ಹರಿಗೂ ಶಕ್ತಿ ಸ್ಮಾರ್ಟ್‍ಕಾರ್ಡ್ ತಲುಪಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು. ಬಳ್ಳಾರಿ ನಗರ ಅಭಿವೃದ್ಧಿಗೆ ಮತ್ತು ನಿಮ್ಮ ಸೇವೆಗೆ ಸದಾ ಸಿದ್ಧ ಎಂದರು.


ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಡಿಎಂಎಫ್ ಅಡಿ 7.90 ರೂ. ಲಕ್ಷ ವೆಚ್ಚದಲ್ಲಿ ಖರೀದಿಸಿದ್ದ 6 ಬಸ್‍ಗಳಿಗೆ ಚಾಲನೆ ನೀಡಿದರು.
ಕಾರ್ಯಕ್ರಮದ ಬಳಿಕ ಅಲಂಕೃತ ಬಸ್‍ಗಳಲ್ಲಿ ಅಧಿಕೃತವಾಗಿ “ಶಕ್ತಿ ಯೋಜನೆ”ಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣ ಸೇವೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರು(ರಾಜ್ಯಸಭೆ) ಡಾ.ಸೈಯದ್ ನಾಸೀರ್ ಹುಸೇನ್, ಮಹಾನಗರ ಪಾಲಿಕೆ ಉಪಮೇಯರ್ ಜಾನಕಿ, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಂ.ರಾಜೇಶ್ವರಿ, ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಕೆ.ನಟರಾಜ್, ಕೆಕೆಆರ್‍ಟಿಸಿ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಾಣಾಧಿಕಾರಿ ಡಿ.ಎಂ.ದೇವರಾಜ್ ಸೇರಿದಂತೆ ನಿಗಮದ ಆಡಳಿತ ಸಿಬ್ಬಂದಿ ವರ್ಗದವರು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here