BP NEWS: ಬಳ್ಳಾರಿ: ಏ.08: ಸಮುದಾಯದ ಎಲ್ಲ ಜನತೆಗೂ ಗುಣಮಟ್ಟ ಆರೋಗ್ಯ ಸೇವೆಗಳು ದೊರಕಲು ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಎಲ್ಲರಿಗೂ ಆರೋಗ್ಯ ಎಂಬ ಘೋಷಣೆಯ ಸಾರ್ಥಕತೆಯನ್ನು ಹೊಂದಬೇಕಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಭಾರತೀಯ ವೈದ್ಯಕೀಯ ಸಂಘ, ಬಳ್ಳಾರಿ ಸೈಕ್ಲಿಸ್ಟ್ ಮತ್ತು ರನ್ನರ್ಸ್ ಫೌಂಡೇಶನ್ ಇವರ ಸಹಯೋಗದಲ್ಲಿ ಶನಿವಾರ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಗೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯ ಪ್ರತಿಯೊಬ್ಬರ ಹಕ್ಕು, ಆರ್ಥಿಕ ಮುಗ್ಗಟ್ಟು ಎದುರಾಗದಂತೆ ಎಲ್ಲರಿಗೂ ಆರೋಗ್ಯ ಸೇವೆಗಳು ಸಮನಾಗಿ ದೊರಕಬೇಕಾದರೆ ನಮ್ಮ ಸುತ್ತಲಿನ ಪರಿಸರವನ್ನು ಮಾಲಿನ್ಯವಾಗದಂತೆ ಜಾಗೃತಿ ವಹಿಸಬೇಕಿದೆ. ಉಚಿತ ಹಾಗೂ ಕೈಗೆಟುಕುವ ರೀತಿಯಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಲು ಇಂದು ವಿವಿಧ ಆಯಾಮಗಳ ಮೂಲಕ ಪ್ರಯತ್ನಿಸಲಾಗುತ್ತಿದ್ದು ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದರು.
ಐಎಂಎ ಅಧ್ಯಕ್ಷೆ ಡಾ.ರೇಣುಕಾ ಮಂಜುನಾಥ್ ಅವರು ಮಾತನಾಡಿ, ಜಗತ್ತಿನ ಶೇ.30ರಷ್ಟು ಜನತೆಗೆ ಸೂಕ್ತ ಮೂಲಭೂತ ವೈದ್ಯಕೀಯ ಸೌಲಭ್ಯಗಳು ಇನ್ನೂ ದೊರಕುತ್ತಿಲ್ಲ. ನಾವು ಮುಂದಿನ ಪೀಳಿಗೆಯನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳಬೇಕಾದರೆ ಸುರಕ್ಷಿತವಾದ ನೀರು, ಗಾಳಿ, ಮಣ್ಣಿನ ಜೊತೆಗೆ ವಾತಾವರಣವು ಕಲುಷಿತವಾಗದಂತೆ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಐಎಂಎ ಉಪಾಧ್ಯಕ್ಷ ಡಾ.ಶ್ರೀನಿವಾಸಲು, ಕಾರ್ಯದರ್ಶಿ ಡಾ.ಚಂದ್ರಶೇಖರ್ ಪಾಟೀಲ್, ಸಹ ಕಾರ್ಯದರ್ಶಿ ಡಾ.ರಾಘವೇಂದ್ರ ಮತ್ತು ಡಾ.ತಿಪ್ಪಾರೆಡ್ಡಿ, ಡಾ.ಲಕ್ಷ್ಮಿಪಾವನಿ, ಡಾ.ಸಂಗೀತ, ಡಾ.ಬಿ.ಕೆ ಸುಂದರ್, ಡಾ.ಎಸ್.ಕೆ ಅರುಣ್, ಡಾ.ಸೋಮನಾಥ್, ಡಾ.ಬಿ.ಕೆ.ಶ್ರೀಕಾಂತ್, ಡಾ.ರವಿಶಂಕರ್ ಸಜ್ಜನ್, ಡಾ.ದಿನೇಶ್ ಗುಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಐಎಮ್‍ಎ ಪದಾಧಿಕಾರಿಗಳು ಹಾಗೂ ಸೈಕ್ಲಿಂಗ್ ಮತ್ತು ರನ್ನರ್ ಕ್ಲಬ್‍ನ ಸದಸ್ಯರು ಭಾಗವಹಿಸಿದ್ದರು.
ಜಾಗೃತಿ ಮೂಡಿಸುವ ಜಾಥಾವು ಜಿಲ್ಲಾ ಆಸ್ಪತ್ರೆಯಿಂದ ಆರಂಭವಾಗಿ ಸಂಗಂ ವೃತ್ತದಿಂದ ರಾಯಲ್ ಸರ್ಕಲ್, ಬೆಂಗಳೂರು ರಸ್ತೆ, ಮೋತಿ ವೃತ್ತ ಮಾರ್ಗವಾಗಿ ರೈಲ್ವೆ ನಿಲ್ದಾಣ ಮೂಲಕ 5 ಕಿಲೋ ಮೀಟರ್ ನಡಿಗೆಯೊಂದಿಗೆ ವಿವಿಧ ವೃತಗಳಲ್ಲಿ ಸಂಚರಿಸಿ ಮಾಹಿತಿಯನ್ನು ಒದಗಿಸಲಾಯಿತು.
ಮತದಾನ ಜಾಗೃತಿ: ಇದೇ ಸಂದರ್ಭದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರೂ ಮತದಾನದಿಂದ ಹೊರಗುಳಿಯಬಾರದು ಎಂಬ ಮಾಹಿತಿ ಸಹ ಸಾರಲಾಯಿತು.