ಅಂತರಾಷ್ಟ್ರೀಯ ಖ್ಯಾತಿಯ ತೊಗಲುಗೊಂಬೆ ಕಲಾವಿದರಾದ ನಾಡೋಜ ಬೆಳಗಲ್ಲು ವೀರಣ್ಣ ಅವರು ವಿಧಿವಶ

0
91

BP NEWS: ಬಳ್ಳಾರಿ: ಏಪ್ರಿಲ್.02: ತೊಗಲು ಗೊಂಬೆಯಾಟದ ಮೂಲಕ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಕಲಾವಿದ ಹಾಗೂ ವಿಧಾನಸಭಾ ಚುನಾವಣೆಯ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್‌ ರಾಯಭಾರಿಯಾಗಿದ್ದ ನಾಡೋಜ ಬೆಳಗಲ್ಲು ವೀರಣ್ಣ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಚೆಳ್ಳಕೇರಿಯಿಂದ ಚಿಕ್ಕಮಗಳೂರಿಗೆ ಪುತ್ರನೊಂದಿಗೆ ಕಾರ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ವಾಹನ ನಿಯಂತ್ರಣಕ್ಕೆ ಸಿಗದೇ ಪಲ್ಟಿಯಾಗಿ ಸ್ಥಳದಲ್ಲಿಯೇ ಹಿರಿಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ(91) ಮೃತಪಟ್ಟಿದ್ದಾರೆ. ಪುತ್ರ ತೀವ್ರಗಾಯಗೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ ಬಿ.ಬೆಳಗಲ್ಲು ಗ್ರಾಮದ ಬೆಳಗಲ್ಲು ಹನುಮಂತಪ್ಪ ಹಾಗೂ ಬೆಳಗಲ್ಲು ವೀರಮ್ಮ ದಂಪತಿಗೆ 1928ರಲ್ಲಿ ಜನಿಸಿದ್ದರು. ತಂದೆ ಬೆಳಗಲ್ಲು ಹನುಮಂತಪ್ಪನವರು ಬಯಲಾಟದ ಮಾಸ್ಟರ್, ವಾಯಿಲಿಟ್ ವಾದಕರಾಗಿದ್ದರು.

ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಬಯಲಾಟಗಳನ್ನು ಆಡಿಸಿ ಕರ್ನಾಟಕ ಜನಪದ ರಂಗಭೂಮಿಯನ್ನು ಶ್ರೀಮಂತಗೊಳಿಸಿದವರು ಹನುಮಂತಪ್ಪ. ತಂದೆಯವರ ಕಲಾ ಪರಂಪರೆಯನ್ನು ವೀರಣ್ಣನವರು ಮೈಗೂಡಿಸಿಕೊಂಡಿದ್ದರು. ಹಲವು‌ ದೇಶದಲ್ಲಿ ತೊಗಲುಗೊಂಬೆ ಪ್ರದರ್ಶನ ಮಾಡಿದ ಬೆಳಗಲ್ ವೀರಣ್ಣ ತಂಡ ತೊಗಲುಗೊಂಬೆಯಾಟದ ಕಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ‌ ಹಿಡಿದ್ದಿದ್ದಾರೆ.

ಐದು ಸಾವಿರ ವರ್ಷಗಳ ಪ್ರಾಚೀನ ಇತಿಹಾಸವಿರುವ ಕರ್ನಾಟಕ ತೊಗಲುಗೊಂಬೆ ಪರಂಪರೆಯನ್ನು ಬೆಳಸಿದ ಕೀರ್ತಿ ಕಲಾವಿದರಾದ ಬೆಳಗಲ್ ವೀರಣ್ಣನವರದ್ದಾಗಿದೆ. ಶ್ರೀರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಅನ್ನು ಅವರು ಸ್ಥಾಪಿಸಿದ್ದರು. ಇಡೀ ಕುಟುಂಬದ ಸದಸ್ಯರೊಂದಿಗೆ ಪಂಚವಟಿ, ಮಹಾತ್ಮ ಗಾಂಧಿ, ಕಿತ್ತೂರು ಚೆನ್ನಮ್ಮ, ಭಾರತ ಸ್ವಾತಂತ್ರ್ಯ ಸಂಗ್ರಾಮ, ಪ್ರವಾದಿ ಬಸವೇಶ್ವರರಂತಹ ಹತ್ತಾರು ತೊಗಲುಗೊಂಬೆ ಆಟಗಳನ್ನು ನಾಡಿನಾದ್ಯಂತ ಪ್ರದರ್ಶನ ಮಾಡಿದ್ದಾರೆ.

ತೊಗಲುಗೊಂಬೆಯಾಟ ಪರಂಪರೆಯಲ್ಲಿ ಬಳ್ಳಾರಿ ಜಿಲ್ಲೆಯ ಪ್ರಾತಿನಿಧ್ಯವನ್ನು ಎತ್ತಿ ಹಿಡಿದಿದ್ದಾರೆ. 90ರಲ್ಲೂ ವಯಸ್ಸಿನಲ್ಲೂ ಉತ್ತಮ ಕಂಠಸಿರಿಯನ್ನು ಹೊಂದಿದ್ದರು.

ವೀರಣ್ಣನವರಿಗೆ ಸಂದ ಪ್ರಶಸ್ತಿಗಳು:
ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ (2000)
ಜಾನಪದ ಶ್ರೀ ಪ್ರಶಸ್ತಿ (2007)
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1992)
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2012)
ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ (2013)
ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ ಇವರು ‘ಬಸವ ಬೆಳಗು’ ಪ್ರಶಸ್ತಿ (2021)

LEAVE A REPLY

Please enter your comment!
Please enter your name here