BP NEWS: ಬಳ್ಳಾರಿ: ಜನೇವರಿ.22:
ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರ ಮುನ್ಸಿಪಲ್ ಮೈದಾನದಲ್ಲಿ ಭಾನುವಾರ ಬಳ್ಳಾರಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆ ವಿಭಜನೆಯ ನಂತರ ಐತಿಹಾಸಿಕ ಹಂಪಿ ಸೇರಿದಂತೆ ಹಲವು ಪ್ರವಾಸಿ ತಾಣಗಳು ವಿಜಯನಗರ ಜಿಲ್ಲೆಗೆ ಸೇರಿವೆ. ಬಳ್ಳಾರಿ ಜಿಲ್ಲೆಯ ವಿಜಯನಗರ ಸಾಮ್ರಾಜ್ಯದ ಇತಿಹಾಸ, ಪರಂಪರೆ ಮುಂದುವರಿಸುವ ನಿಟ್ಟಿನಲ್ಲಿ ಸಂಡೂರು ಕುಮಾರ ಸ್ವಾಮಿ ದೇವಸ್ಥಾನ, ಸಂಗನಕಲ್ಲು ಗುಡ್ಡು, ಬಳ್ಳಾರಿ ಕನಕ ದುರ್ಗಮ್ಮ ದೇವಸ್ಥಾನ, ಕುರುಗೋಡು ದೊಡ್ಡ ಬಸಪ್ಪ ದೇವಸ್ಥಾನ, ಐತಿಹಾಸಿಕ ಕೋಟೆ ಮಲ್ಲೇಶ್ವರ ದೇಗುಲ, ಚೆಳ್ಳಗುರ್ಕಿ ಎರ್ರಿತಾತ ಮಠ ಸೇರಿದಂತೆ ವಿವಿಧ ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಬಳ್ಳಾರಿ ಜಿಲ್ಲೆಯ ಕಲೆ ಸಾಂಸ್ಕøತಿಕ ವೈಭವ ಸಾರುವ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಗರದಲ್ಲಿ ಅಂತರರಾಷ್ಟ್ರೀಯ ಆಕರ್ಷಣೆಯ ಬಳ್ಳಾರಿ ಫಿಲಂ ಸಿಟಿ ನಿರ್ಮಾಣ ಮಾಡಲಾಗುವುದು. ಜಿಲ್ಲೆಯ ಕೈಗಾರಿಕಾ ವಲಯ ಅಭಿವೃದ್ಧಿ ಪಡಿಸಿ ಬಳ್ಳಾರಿಯನ್ನು ದೇಶದ ಸ್ಟೀಲ್ ಉತ್ಪಾದನೆ ಹಬ್ ಆಗಿ ರೂಪಿಸಲಾಗುವುದು. ಖಾಸಗಿ ಕೈಗಾರಿಕೆಗಳಲ್ಲಿ ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯ ಯುವ ಜನತೆಗೆ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯ ರೈತರು ತುಂಗಭದ್ರ ಜಲಾಶಯದ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಹೊಸಪೇಟೆ ಜಲಾಶಯದ ಸಂಗ್ರಹಣ ಸಾಮಥ್ರ್ಯ 130ಟಿ.ಎಂ.ಸಿ ಯಿಂದ ಊಳು ಸಂಗ್ರಹದಿಂದಾಗಿ 80 ಟಿ.ಎಂ.ಸಿ ಸಾಮಥ್ರ್ಯಕ್ಕೆ ಇಳಿದಿದೆ. ಕೊರತೆ 40 ಟಿ.ಎಂ.ಸಿ ನೀರನ್ನು ಸಂಗ್ರಹಿಸಲು ರೂ.1000 ಕೋಟಿ ವೆಚ್ಚದಲ್ಲಿ ನವಲೆ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲಾಗುವುದು. ಜಿಲ್ಲೆಯ ರೈತರಿಗೆ ಎರಡು ಬೆಳೆಗಳಿಗೆ ಜಲಾಶಯದ ನೀರು ನೀಡಲಾಗುವುದು. ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಶಿಕ್ಷಣ, ಆರೋಗ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ತ್ವರಿತ ವೇಗದಲ್ಲಿ ಜಿಲ್ಲೆ ಅಭಿವೃದ್ಧಿ ಹೊಂದುತ್ತಿದೆ. ಮೊದಲ ಬಾರಿ ಆಯೋಜಿಸಲಾಗಿರುವ ಬಳ್ಳಾರಿ ಉತ್ಸವದಲ್ಲಿ ಜನತೆ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಬಳ್ಳಾರಿ ಉತ್ಸವವು ಸೂರ್ಯ, ಚಂದ್ರ ಇರುವರೆಗೂ ಮುಂದುವರೆಯಬೇಕು ಎಂದು ಸಚಿವ ಶ್ರೀರಾಮುಲು ಆಶಿಸಿದರು.
ಶಾಸಕ ಜಿ.ಸೋಮಶೇಖರ್ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಬಳ್ಳಾರಿ ಉತ್ಸವ ನಾಡಿನಾದ್ಯಂತ ಪ್ರಸಿದ್ಧಿಯೊಂದಿಗೆ ಯಶಸ್ಸು ಕಂಡಿದೆ. ಉತ್ಸವ ಕಾರ್ಯಕ್ರಮ ನೋಡಲು ಉತ್ಸಾಹದೊಂದಿಗೆ ಜನತೆ ಆಗಮಿಸಿ ಉತ್ಸವಕ್ಕೆ ಮೆರಗು ನೀಡಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಉತ್ಸವದ ಯಶಸ್ಸಿಗೆ ಶ್ರಮಿಸಿದೆ ಎಂದರು.
ಸಮಾರೋಪ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೆಯರ್ ಬಿ.ರಾಜೇಶ್ವರಿ, ಬುಡಾ ಅಧ್ಯಕ್ಷ ಸರ್ವಶೆಟ್ಟಿ ಮಾರುತಿ ಪ್ರಸಾಧ್, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯಕ್ತ ಹೇಮಂತ್, ಪಾಲಿಕೆ ಆಯುಕ್ತ ಜಿ.ರುದ್ರೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ನಂತರ ವೇದಿಕೆಯಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.