BP NEWS: ಬಳ್ಳಾರಿ: ಜನೇವರಿ.11: ಯುವಕರೆಲ್ಲರೂ ಏಕೀಕರಣದ ಪರಿಕಲ್ಪನೆ, ಕೋಮು ಸೌಹರ್ಧತೆಯ ಮನೋಭಾವ, ಸಹೋದರತತ್ವ, ಧೈರ್ಯ ಮತ್ತು ಸಾಹಸ ಆಳವಡಿಸಿಕೊಂಡು ರಾಷ್ಟ್ರೀಯ ಐಕ್ಯತಾ ಭಾವನೆಯನ್ನು ರೂಢಿಸಿಕೊಳ್ಳಬೇಕೆಂದು ಮಹಾನಗರಪಾಲಿಕೆ ಮಹಾಪೌರರಾದ ಎಂ.ರಾಜೇಶ್ವರಿ ಸುಬ್ಬರಾಯುಡು ಅವರು ಕರೆ ನೀಡಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಸಂಹವನ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ನೆಹರು ಯುವ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಜನವರಿ 11 ರಿಂದ 16 ರವರೆಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ಜನೋತ್ಸವ ಮತ್ತು ಭಾರತದ ಜಿ.20 ಅಧ್ಯಕ್ಷತೆ, 8 ವರ್ಷಗಳ ಸೇವೆ ಹಾಗೂ ಗರೀಬ್ ಕಲ್ಯಾಣ, ಆಜಾದಿ ಕ ಅಮೃತ ಮಹೋತ್ಸವ, ಏಕ ಭಾರತ ಶ್ರೇಷ್ಠ ಭಾರತ ಮತ್ತು ಪ್ರಧಾನ ಮಂತ್ರಿಯವರ ದೂರದೃಷ್ಠಿ 2047ರ ಕುರಿತು ಛಾಯಾಚಿತ್ರ ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಅದರಂತೆ ನಮ್ಮ ರಾಜ್ಯದಲ್ಲಿ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಯುವಜನಕ್ಕೆ ಸಾಂಸ್ಕøತಿಕ ಕೌಶಲ್ಯ ಪ್ರತಿಭೆಗಳನ್ನು ಪ್ರದರ್ಶಿಸಲು ಹಲವಾರು ವೇದಿಕೆಗಳಿದ್ದು, ಅವುಗಳನ್ನು ಬಳಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೇಂದ್ರ ಸಂವಹನ ಇಲಾಖೆಯ ಉಪನಿದೇರ್ಶಕರಾದ ಡಾ.ಟಿ.ಸಿ ಪೂರ್ಣಿಮಾ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಜ.12ರಂದು ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ದೇಶದಾದ್ಯಂತ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಜ.12ರಿಂದ 16ರವರೆಗೆ ಛಾಯಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಒಂದು ದೇಶವು ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಕೃಷಿ ಮತ್ತು ಯುವಜನತೆಯ ಮೇಲೆ ಅವಲಂಭಿತವಾಗಿರುತ್ತದೆ. ಸ್ವಾಮಿ ವಿವೇಕಾನಂದರ ಆಶಯದಂತೆ ಯುವ ಸಮುದಾಯಕ್ಕೆ ಜ್ಞಾನ, ಅರಿವು ಮತ್ತು ಶಿಕ್ಷಣವನ್ನು ಕೊಡಬೇಕು. ಯುವಕರು ತಮ್ಮ ಸಾಮಥ್ರ್ಯವನ್ನು ಅರಿತು ತಮ್ಮನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಮತ್ತು ನಿರ್ದೇಶನಗಳನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಕೇಂದ್ರ ಸಂವಹನ ಇಲಾಖೆಯ ಮುಖ್ಯ ಉದ್ದೇಶವಾಗಿದೆ. ಜನರು ಅವುಗಳ ಮಾಹಿತಿಯನ್ನು ಹೊಂದಬೇಕು ಎಂದು ತಿಳಿಸಿದರು.
ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಸಂಸ್ಥೆಯ ಅಧ್ಯಕ್ಷರಾದ ಕಪ್ಪಗಲ್ ಗಿರಿಜಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹೈದರಾಬಾದ್‍ನ ದೂರದರ್ಶನ ಕೇಂದ್ರ ನಿವೃತ್ತ ಉಪನಿರ್ದೇಶಕರಾದ ಡಾ.ಕೆ.ಸುಧಾಕರರಾವ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ನಿಷ್ಠಿ ರುದ್ರಪ್ಪ ಅವರು ರಾಷ್ಟ್ರೀಯ ಯುವ ಜನೋತ್ಸವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಶರಣಪ್ಪ, ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ಪದವಿ ಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕರಾದ ಟಿ. ಸುನಿತ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ, 8 ವರ್ಷಗಳ ಸೇವೆ ಹಾಗೂ ವಿವಿಧ ಯೋಜನೆಗಳ ಕುರಿತು ಕಾಲೇಜು ಆವರಣದಲ್ಲಿ ಹಾಕಲಾಗಿದ್ದ ಮಾಹಿತಿ ಫಲಕಗಳನ್ನು ನೂರಾರು ವಿದ್ಯಾರ್ಥಿಗಳು ವೀಕ್ಷಿಸುತ್ತಿರುವುದು ಗಮನ ಸೆಳೆಯಿತು.