BP NEWS: ಮಂಗಳೂರು: ಜನೇವರಿ.10: ಕನ್ನಡ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ನಿಧನರಾಗಿದ್ದಾರೆ. ವಯೋಸಹಜ ಕಾರಣಗಳಿಂದ ನಿಧನ ಹೊಂದಿದ್ದಾರೆ. ಅವರು ಮಂಗಳೂರಿನ ಹ್ಯಾಟ್ ಹಿಲ್ ಬಳಿ ನೆಲೆಸಿದ್ದು, ನಾಲ್ವರು ಪುತ್ರರು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಗಡಿನಾಡು ಕಾಸರಗೋಡಿನಲ್ಲಿ ಜೂನ್ 30, 1936 ರಂದು ಹುಟ್ಟಿ ಬೆಳೆದ ಅವರು ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆ ಹೊಂದಿದ್ದರು. ಮೊದಲ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಜನಪ್ರಿಯವಾಗಿ ಗಮನ ಸೆಳೆದಿದೆ. ಸುಮಾರು 10 ಕಾದಂಬರಿ, 6 ಕಥಾ ಸಂಕಲನಗಳು, 5 ಬಾನುಲಿ ನಾಟಕ, ಲೇಖನ, ಪ್ರವಾಸ ಕಥನ ಸಹಿತ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.
ಕೇರಳದ ಕಾಸರಗೋಡು ಜಿಲ್ಲೆಯವರಾದ ಇವರು ಚಂದ್ರಗಿರಿ ತೀರದಲ್ಲಿ ಪುಸ್ತಕವನ್ನು ಬರೆದಿದ್ದಾರೆ. ಇವರು ತಮ್ಮ ಬರಹಗಳಲ್ಲಿ ಮುಸ್ಲಿಂನ ಕೆಲವು ಸಂಪ್ರದಾಯಗಳನ್ನು ಕಟುವಾಗಿ ಟೀಕಿಸುತ್ತಿದ್ದರು. ಸಾರಾ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ಪಿ.ಅಹಮದ್ ನ್ಯಾಯವಾದಿ. ತಾಯಿ ಚೈನಾಬಿ. ಅವರ ಹುಟ್ಟಿದೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರು, ಹೈಸ್ಕೂಲಿನವರೆಗೆ ಕಲಿತದ್ದು ಕಾಸರಗೋಡಿನಲ್ಲಿ.
ಎಂಜನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ ಆಕರ್ಷಣೆ ಹುಟ್ಟಿಸಿದವು.