ಬಳ್ಳಾರಿ: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ

0
81

BP NEWS: ಬಳ್ಳಾರಿ: ಡಿಸೆಂಬರ್.28: ಕೋವಿಡ್‍ನ ನಾಲ್ಕನೇ ಅಲೆಯನ್ನು ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ಸೋಂಕನ್ನು ನಿಯಂತ್ರಿಸಲು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್‍ಗಳ ಗುಣಮಟ್ಟ ತಪಾಸಣೆ ಮಾಡಬೇಕು. ಬೆಡ್‍ಗಳು ಮತ್ತು ವೆಂಟಿಲೇಟರ್‍ಗಳ ಸ್ಟಾಕ್‍ಗಳ ಅಗತ್ಯತೆಯನ್ನು ಪರಿಶೀಲಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಂದಾಲ್ ಹಾಗೂ ಇತರೆ ಕಾರ್ಖಾನೆಗಳಿಗೆ ಹೊರ ರಾಜ್ಯದಿಂದ ಬರುವ ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚು ಕೋವಿಡ್ ತಪಾಸಣಾ ಕೇಂದ್ರಗಳನ್ನು ತೆರೆಯಬೇಕು ಎಂದು ತಿಳಿಸಿದರು.
ಹೆಚ್ಚು ಜನರು ಸೇರುವ ಸಿನಿಮಾ ಮಂದಿರಗಳಲ್ಲಿ ಹಾಗೂ ಒಳಾಂಗಣಗಳಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ತಪ್ಪದೇ ಮಾಸ್ಕ್ ಧರಿಸುವಂತೆ ಸೂಚಿಸಬೇಕು ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಅಗತ್ಯತೆ, ಆಕ್ಸಿಜನ್ ಘಟಕಗಳು, ವೈದ್ಯಕೀಯ ವ್ಯವಸ್ಥೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿದಂತೆ ರ್ಯಾಪಿಡ್ ಟೆಸ್ಟ್‍ಗಳನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ನೀರಿನಲ್ಲಿ ಕಾಲುಜಾರಿ ಬಿದ್ದು ಸಾವಿನ ಪ್ರಕರಣಗಳು ಹೆಚ್ಚು ಸಂಭವಿಸುತ್ತಿದ್ದು, ಜಿಲ್ಲೆಯ ಪ್ರಮುಖ ಕಾಲುವೆಗಳಾದ ತೋರಣಗಲ್ಲು, ಬಂಡಿಹಟ್ಟಿ, ಅಲ್ಲೀಪುರ ಕಾಲುವೆ ಬ್ರಿಡ್ಜ್‍ಗಳ ಕೆಳಗೆ ಗ್ರಿಲ್‍ಗಳನ್ನು ಆಳವಡಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಜಿ.ಲಿಂಗಮೂರ್ತಿ, ಸಹಾಯಕ ಆಯುಕ್ತರಾದ ಹೇಮಂತ್‍ಕುಮಾರ್.ಎನ್, ಪ್ರೊಬೆಷನರಿ ಐಎಎಸ್ ಅಧಿಕಾರಿ ರೂಪಿಂದರ್ ಕೌರ್, ಎಡಿಸಿ ಮಂಜುನಾಥ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here