BP NEWS: ಬಳ್ಳಾರಿ: ಡಿಸೆಂಬರ್.19: ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ಐಸಿಎಸ್‍ಐ) ಬೆಂಗಳೂರು ವಲಯ ಇವರೊಂದಿಗೆ ಶೈಕ್ಷಣಿಕ ಒಡಂಬಡಿಕೆಯು ಸೋಮವಾರ ನಡೆಯಿತು.
ಮುಖ್ಯವಾಗಿ ವಾಣಿಜ್ಯ ಅಧ್ಯಯನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಕಂಪನಿ ಕಾರ್ಯದರ್ಶಿಗಳಾಗಿ ತರಬೇತಿ ನೀಡುವುದು, ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಬೋಧಕ ಸಿಬ್ಬಂದಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಜ್ಞಾನಾಭಿವೃದ್ಧಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಈ ಸಂಸ್ಥೆ ಹೆಸರುವಾಸಿಯಾಗಿರುತ್ತದೆ.
ಒಡಂಬಡಿಕೆಯ ಅನ್ವಯ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಐಸಿಎಸ್‍ಐ ಪ್ರಮಾಣ ಪತ್ರ, ವಾಣಿಜ್ಯಶಾಸ್ತ್ರ ವಿಭಾಗದ ಸಿಬ್ಬಂದಿಗೆ ವಿವಿಧ ತರಬೇತಿ ಕಾರ್ಯಕ್ರಮಗಳ ಆಯೋಜನೆ, ಗ್ರಂಥಾಲಯ ಸೌಲಭ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಕಾರ್ಯಾಗಾರ ಆಯೋಜಿಸುವುದು ಹಾಗೂ ಆಧುನಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಸೇರಿದಂತೆ ಇನ್ನಿತರ ಶೈಕ್ಷಣಿಕವಾದ ಕಾರ್ಯಕ್ರಮಗಳಿಗೆ ಉತ್ತೇಜಿಸುವುದು ಇದರ ಮುಖ್ಯ ಉದ್ದೇಶಗಳಾಗಿವೆ.
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸಿದ್ದು ಪಿ ಆಲಗೂರ ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ಐಸಿಎಸ್‍ಐ) ಬೆಂಗಳೂರು ವಲಯದ ಮುಖ್ಯಸ್ಥರಾದ ನಮನ್ ಜೋಷಿ ಹಾಗೂ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್.ಸಿ ಪಾಟೀಲ್ ಇವರೊಂದಿಗೆ ಒಡಂಬಡಿಕೆ ಪತ್ರವನ್ನು ಪರಸ್ಪರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಜೀಲನ್ ಬಾಷಾ, ಬಳ್ಳಾರಿ ಕಂಪನಿ ಕಾರ್ಯದರ್ಶಿಗಳಾದ ಸಿ.ಎಸ್ ವಿಷ್ಣುಕುಮಾರ್ ಹಾಗೂ ಕೃಷ್ಣಮೂರ್ತಿ ಉಪಸ್ಥಿತರಿದ್ದರು.