BP NEWS: ವಿಜಯನಗರ(ಹೊಸಪೇಟೆ): ಡಿಸೆಂಬರ್.05: 2023ರ ಜನವರಿ ತಿಂಗಳಾಂತ್ಯಕ್ಕೆ ಮೂರು ದಿನಗಳ ಕಾಲ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತವಾರಿ ಸಚಿವರಾದ ಶಶಿಕಲಾ ಅಣ್ಣ ಸಾಹೇಬ್ ಜೊಲ್ಲೆ ಅವರು ತಿಳಿಸಿದರು.
ಅವರು ಸೋಮವಾರದಂದು ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಹಂಪಿ ಉತ್ಸವ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಈ ಮೊದಲು 2023 ರ ಜನವರಿ ತಿಂಗಳ 7 ಮತ್ತು 8 ರಂದು ಎರಡು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಅದೇ ಸಮಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಕಾರ್ಯಕ್ರಮವನ್ನು ಜನವರಿ ತಿಂಗಳಾಂತ್ಯಕ್ಕೆ ಮುಂದೂಡಿ ಜನವರಿ 27, 28 ಮತ್ತು 29 ರಂದು ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ದಿನಾಂಕವನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ. ಆದರೆ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಅದ್ದೂರಿ ಆಚರಣೆ: ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಕಳೆದ ಎರಡು ವರ್ಷಗಳಿಂದ ಹಂಪಿ ಉತ್ಸವವನ್ನು ಆಯೋಜಿಸಲಾಗಿರಲಿಲ್ಲ. ಹೀಗಾಗಿ ಈ ಬಾರಿ ಕಳೆದ ಎಲ್ಲಾ ಹಂಪಿ ಉತ್ಸವಗಳಿಗಿಂತಲೂ ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ. ಮೂರು ದಿನಗಳ ಕಾಲ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಸಾರುವಂತಹ ಧ್ವನಿ ಬೆಳಕಿನ ಕಾರ್ಯಕ್ರಮವು ಇದರಲ್ಲಿ ಇರಲಿದೆ. ವಿಜಯನಗರ ಗತ ವೈಭವವನ್ನು ಮರುಸೃಷ್ಟಿಸುವ ರೀತಿಯಲ್ಲಿ ಉತ್ಸವ ಆಯೋಜಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
3 ವೇದಿಕೆ: ಹಂಪಿಯ ಗಾಯಿತ್ರಿ ಪೀಠದ ಹತ್ತಿರ ಮೊದಲ ವೇದಿಕೆಯನ್ನು ನಂತರ ಎರಡನೇ ವೇದಿಕೆಯನ್ನು ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಎದುರು ಬಸವಣ್ಣನ ಹತ್ತಿರ ನಿರ್ಮಾಣ ಮಾಡಲು ತಿರ್ಮಾನಿಸಲಾಗಿದ್ದು, ಮತ್ತೊಂದು ವೇದಿಕೆಯನ್ನು ಜಾಗದ ಲಭ್ಯತೆಯನ್ನು ಆಧರಿಸಿ ತೀರ್ಮಾನ ಮಾಡಲಾಗುತ್ತದೆ ಎಂದರು.
ಉತ್ಸವ ಆಚರಣೆಗೆ ಅನುದಾನ: ಈಗಾಗಲೇ 2021-22 ನೇ ಸಾಲಿನ ಹಂಪಿ ಉತ್ಸವ ಆಚರಣೆಯ ಸಲುವಾಗಿ ಕನ್ನಡ ಸಂಸ್ಕøತಿ ಇಲಾಖೆಯಿಂದ 4.10 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿರುತ್ತದೆ. ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದ್ದು, 6 ಕೋಟಿ ರೂಪಾಯಿಗಳ ಅನುದಾನ ನೀಡುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ. ಅಗತ್ಯ ಅನುದಾನವನ್ನು ನೀಡುವಂತೆ ಈಗಾಗಲೇ ಸರಕಾರದ ವಿವಿಧ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಇದಲ್ಲದೆ ಖಾಸಗಿ ಕಂಪನಿಗಳ ಸಿಎಸ್‍ಆರ್ ನಿಧಿಯನ್ನು ನೀಡುವಂತೆ ಕೋರಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹುಡಾ ಅಧ್ಯಕ್ಷ ಅಶೋಕ್ ಜೀರೆ, ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಟಿ.ವಿ.ಪ್ರಕಾಶ್, ಸಹಾಯಕ ಆಯುಕ್ತ ಸಿದ್ರಾಮೇಶ್ವರ, ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗಣ್ಣನವರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.