ಬಳ್ಳಾರಿ: ವಿಶ್ವ ವಿಕಲಚೇತನರ ದಿನ ಆಚರಣೆ

0
88

BP NEWS: ಬಳ್ಳಾರಿ: ಡಿಸೆಂಬರ್.03: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ತೋರಣಗಲ್ಲಿನ ಜೆಎಸ್‍ಡಬ್ಲ್ಯೂ ತಮನ್ನಾ ವಿಶೇಷ ಮಕ್ಕಳ ಶಾಲೆ, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ವಕ್ಫ್ ಸಮಿತಿಯ ಶಾದಿ ಮಹಲ್‍ನಲ್ಲಿ ಶನಿವಾರದಂದು ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸದರಾದ ವೈ.ದೇವೇಂದ್ರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವ ಅಂಗವಿಕಲರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರಾದ ವೈ.ದೇವೇಂದ್ರಪ್ಪನವರು ಹುಟ್ಟುತ್ತಲೇ ಯಾರೂ ಅಂಗವಿಕಲರಲ್ಲ. ಅದು ತಂದೆ-ತಾಯಿಯ ಕೊಡುಗೆಯಾಗಿದ್ದು, ಕುಗ್ಗದೇ ಇರಬೇಕು ಎಂದು ತಿಳಿಸಿದ ಅವರು, ಸರ್ಕಾರದಿಂದ ಹಲವಾರು ಯೋಜನೆಗಳನ್ನು ನೀಡಿದ್ದು, ದ್ವಿ-ಚಕ್ರ ವಾಹನಗಳು ಸೇರಿದಂತೆ ವಿವಿಧ ಯಂತ್ರೋಪಕರಣಗಳನ್ನು ವಿತರಿಸುತ್ತಿದೆ. ಜಿಲ್ಲೆಗೆ ಸುಮಾರು 2ಸಾವಿರ ವಾಹನಗಳ ಬೇಡಿಕೆಯಿದ್ದು, ಮುಂಬರುವ ದಿನಗಳಲ್ಲಿ ಡಿಎಂಎಫ್ ಅನುದಾನಡಿಯಲ್ಲಿ ಖರೀದಿಸಿ ವಿತರಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸತೀಶ್ ಜೆ.ಬಾಳೆ ಅವರು ಮಾತನಾಡಿ, ವಿಕಲಚೇತನರಲ್ಲಿ ಮಾನಸಿಕವಾಗಿ ಸ್ಥೈರ್ಯವನ್ನು ತುಂಬುವುದೇ ವಿಶ್ವ ಅಂಗವಿಕಲ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವಿಜಯಕುಮಾರ್ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 800 ವಿಕಲಚೇತನರಿಗೆ ಡಿಎಂಎಫ್, ಶಾಸಕರ ಅನುದಾನ ಹಾಗೂ ಇತರೆ ಅನುದಾನದಲ್ಲಿ ದ್ವಿ-ಚಕ್ರ ವಾಹನಗಳನ್ನು ವಿತರಿಸಲು ಮಾಹಿತಿಯನ್ನು ಕಲೆಹಾಕಲಾಗಿದ್ದು, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಅದೇ ರೀತಿಯಾಗಿ ವಾಕಿಂಗ್ ಸ್ಟೀಕ್, ಇಯರಿಂಗ್ ಬಡ್ಸ್‍ಗಳನ್ನು ವಿತರಿಸಲು ಸಹ ಮಾಹಿತಿಯನ್ನು ಕಲೆ ಹಾಕಿ ವಿತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ವಿಕಲಚೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಎಂ.ರಾಜೇಶ್ವರಿ, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಅಪರ ಜಿಲ್ಲಾಧಿಕಾರಿ ಪಿಎಸ್ ಮಂಜುನಾಥ, ಜಿಲ್ಲಾ ಅಂಗವಿಕರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಗೋವಿಂದಪ್ಪ ಹೆಚ್.ಎಂ ಸೇರಿದಂತೆ ವಿಕಲಚೇತನರು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here