ಬಳ್ಳಾರಿ: ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ

0
85

BP NEWS: ಬಳ್ಳಾರಿ: ನವೆಂಬರ್.25: ಜಿಲ್ಲೆಯ ಹೊರವಲಯದ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಕಷ್ಟು ಗುಂಡಿಗಳಿದ್ದು, ಅವುಗಳನ್ನು ಇನ್ನೂ 10 ದಿನಗಳಲ್ಲಿ ಮುಚ್ಚುವಂತೆ ಲೋಕೋಪಯೋಗಿ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಗುಗ್ಗರಹಟ್ಟಿ ರಸ್ತೆ ಹಾಗೂ ಹಲಕುಂದಿಯ ರೈಲ್ವೇ ಗೇಟ್ ಪಕ್ಕದ ರಸ್ತೆಗಳಲ್ಲಿ ಗುಂಡಿಗಳಿದ್ದು, ಅವುಗಳನ್ನು ಮುಚ್ಚುವಂತೆ ಹಾಗೂ ನಿರ್ಮಾಣವಾದಂತಹ ರಸ್ತೆಗಳನ್ನು ಪ್ರತಿ 5 ತಿಂಗಳಿಗೊಮ್ಮೆ ಪರಿಶೀಲಿಸಿ ದುರಸ್ಥೀಕರಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಎಂಜಿ ವೃತ್ತದಲ್ಲಿ ಸಿಗ್ನಲ್ಸ್‍ಗಳನ್ನು ಆಳವಡಿಸಬೇಕು ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ಪ್ರಸ್ತಾಪಿಸಿದರು, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು, ಅದಕ್ಕೆ ಬೇಕಾದ ಸೂಕ್ತ ಕ್ರಮಗಳು ಮತ್ತು ಮಾಹಿತಿ ನೀಡಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಹಿತದೃಷ್ಟಿಯಿಂದ ಲಾರಿ ಟರ್ಮಿನಲ್ ಸ್ಥಳಾಂತರಿಸುವ ಕುರಿತು ಮನವಿಯಿದ್ದು, ಇದಕ್ಕಾಗಿ ಸೂಕ್ತ ಜಾಗ ಕಲ್ಪಿಸಲು ತಹಶೀಲ್ದಾರ್ ವಿಶ್ವನಾಥ ಅವರಿಗೆ ಗುರುತಿಸುವಂತೆ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಸೂಚನೆ ನೀಡಿದರು.
ನಗರದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಹೊಸಪೇಟೆ ರಸ್ತೆಯ ವೇಣಿ ವೀರಾಪುರದಿಂದ ಸಿರುಗುಪ್ಪ ರಸ್ತೆಗೆ ಕಲ್ಪಿಸುವ ಮಾರ್ಗವಿದ್ದರೆ, ಅದರ ಮಾಹಿತಿ ನೀಡಿ ಎಂದು ರಾಜ್ಯ ಮತ್ತು ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಒಳಗಡೆ ಭಾರಿ ಗಾತ್ರದ ವಾಹನಗಳು ಸಂಚರಿಸುತ್ತಿವೆ. ಇದರಿಂದ ರಸ್ತೆಗಳು ಹದಗೆಡುತ್ತಿದ್ದು, ಅವುಗಳನ್ನು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಕ್ತ ಮಾರ್ಗಗಳನ್ನು ಗುರುತಿಸಿ ಪ್ರಸ್ತಾವನೆ ನೀಡಿ ಎಂದು ಅವರು ತಿಳಿಸಿದರು.
ಈಗಾಗಲೇ ರಾಯಲ್ ವೃತ್ತದಲ್ಲಿ ಗಡಿಯಾರ ಸ್ಥಂಭ ಕಾಮಗಾರಿ ನಿರ್ಮಾಣವಾಗುತ್ತಿದ್ದು, ವೃತ್ತದಲ್ಲಿ ಸಾಕಷ್ಟು ಆಟೋಗಳು ಅಲ್ಲಿಯೇ ಇರುತ್ತವೆ. ಇದರಿಂದ ಓಡಾಡುವ ಬೇರೆ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದ್ದು, ಕೂಡಲೇ ಕ್ರಮವಹಿಸಬೇಕು ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಪಾದಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಸುಗಮ ಸಂಚಾರಕ್ಕಾಗಿ ಜಿಬ್ರಾ ಕ್ರಾಸಿಂಗ್, ಬ್ಲಿಂಕರ್‍ಗಳನ್ನು ಆಳವಡಿಸಲು ಮಹಾನಗರ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಆಯುಕ್ತರಾದ ಜಿ.ರುದ್ರೇಶ್ ಅವರು ತಿಳಿಸಿದರು.
ಸಭೆಯಲ್ಲಿ ಪಟ್ಟಣಸೆರಗು, ಗುತ್ತಿಗನೂರು, ಓರ್ವಾಯಿ ರಸ್ತೆ ನಿರ್ಮಾಣ ಹಾಗೂ ಕುಡುತಿನಿಯಿಂದ ಕಂಪ್ಲಿ ರಸ್ತೆಯ ದುರಸ್ತಿ, ಬಿಸಿಲಹಳ್ಳಿಯಿಂದ ಜೋಳದರಾಶಿ ರಸ್ತೆ ದುರಸ್ತಿ ಕುರಿತಂತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಟರಾಜ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here