BP NEWS: ಬೆಂಗಳೂರು: ಅಕ್ಟೋಬರ್.23: ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ (56) ಇನ್ನು ನೆನಪು ಮಾತ್ರ. ತೀವ್ರ ಅನಾರೋಗ್ಯದ ಕಾರಣ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಶನಿವಾರ ಮಧ್ಯರಾತ್ರಿ 12ರ ಸುಮಾರಿಗೆ ಕೊನೆಯುಸಿರೆಳೆದರು.
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದವರಲ್ಲಿ ಮುಂಚೂಣಿಯಲ್ಲಿದ್ದರು. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಎಚ್.ವಿ. ಕೌಜಲಗಿ, ಎಸ್.ಬಿ. ಪದಕಿ, ವೆಂಕರಡ್ಡಿ ಎಸ್. ತಿಮ್ಮರಡ್ಡಿ, ಕೆ.ಎಚ್. ವೀರಭದ್ರಪ್ಪ, ಜಿ.ಕೆ. ಟಕ್ಕೇದ, ಆರ್.ವಿ. ಪಾಟೀಲ, ಸಿ.ಎಂ. ಮಾಮನಿ, ಎಸ್.ಎಸ್. ಕೌಜಲಗಿ, ವಿಶ್ವನಾಥ ಕೆ. ಮಾಮನಿ ಇವರೆಲ್ಲ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿನಿಧಿಸಿದ ಘಟಾನುಘಟಿಗಳು. ಈ ಸಂಪ್ರದಾಯವನ್ನು ಸಮರ್ಥವಾಗಿ ಮುಂದುವರಿಸಿದವರು ಆನಂದ ಮಾಮನಿ.
ಒಬ್ಬರೇ ಸತತ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿ ಜಯಗಳಿಸಿದವರಿಲ್ಲ. ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ‘ಹ್ಯಾಟ್ರಿಕ್’ ಸಾಧನೆ ಮಾಡಿದ್ದರು. ಅಭಿಮಾನಿಗಳಿಂದ ಅಜಾತ ಶತ್ರುವೆಂದು ಕರೆಸಿಕೊಂಡಿದ್ದ ಅವರು ಮೃದು ಸ್ವಭಾವದಿಂದಾಗಿಯೇ ಜನಾನುರಾಗಿ ಆಗಿದ್ದರು.