BP NEWS: ಬಳ್ಳಾರಿ: ಅಕ್ಟೋಬರ್.13: ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಬಿಡಿಡಿಎಸ್ ಚೈಲ್ಡ್‍ಲೈನ್ ಸಹಯೋಗದೊಂದಿಗೆ ಬಳ್ಳಾರಿಯಲ್ಲಿ ವಿವಿಧೆಡೆ ದಾಳಿ ನಡೆಸಿ ಐವರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ.
ನಗರದ ಕೌಲ್ ಬಜಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿವಿಧ ಸ್ಥಳಗಳಲ್ಲಿ ಗ್ಯಾರೇಜ್, ಬೇಕರಿ, ಹೋಟೆಲ್, ಮೆಕ್ಯಾನಿಕ್ ಶಾಪ್, ಕಿರಾಣಿ ಅಂಗಡಿ ಇತ್ಯಾದಿ ಉದ್ದಿಮೆಗಳ ಮೇಲೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986ರಡಿಯಲ್ಲಿ ನೇಮಕವಾದ ನಿರೀಕ್ಷಕರ ಟಾಸ್ಕ್ ಪೋರ್ಸ್ ಸಮಿತಿ ಅಧಿಕಾರಿಗಳೊಂದಿಗೆ ಆಕಸ್ಮಿಕ ದಾಳಿ ಮಾಡಿ 5 ಕಿಶೋರ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಸದರಿ ಮಕ್ಕಳನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಮಕ್ಕಳ ವಯಸ್ಸಿನ ದಾಖಲೆಗಳನ್ನು ಪಡೆದ ನಂತರ ಮಾಲೀಕರ ವಿರುದ್ದ ಬಾಲಕಾರ್ಮಿಕ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ ತಿಳಿಸಿದ್ದಾರೆ.
ಮುಂದುವರೆದು ಸದರಿ ಸ್ಥಳಗಳಲ್ಲಿ ಎಲ್ಲಾ ಮಾಲೀಕರಿಗೆ ಬಾಲಕಾರ್ಮಿಕ ಕಾಯ್ದೆ ಜಾಗೃತಿಗಾಗಿ ಕರಪತ್ರ ಮತ್ತು ಪೋಸ್ಟರ್‍ಗಳನ್ನು ವಿತರಿಸಲಾಯಿತು.
ಈ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಕಾರ್ಮಿಕ ಅಧಿಕಾರಿ ಕಮಲ್ ಅಲ್ತಾಪ್ ಅಹಮದ್, ಕಾರ್ಮಿಕ ನಿರೀಕ್ಷಕ ರವಿದಾಸ್, ಶಿಶು ಅಭಿವೃದ್ಧಿ ಇಲಾಖೆಯ ಶಿವಕುಮಾರ ಸ್ವಾಮಿ, ಎ.ಎಸ್.ಐ ಬೋಜರಾಜ, ಟಿ.ಎ.ಕುಬೇರ, ಗ್ರಾಮ ಲೆಕ್ಕಿಗ ಉಮೇಶ್, ಸಿ.ಆರ್.ಪಿ ವಿಜಯಕುಮಾರ, ರಾಷ್ಟ್ರೀಯ ಬಾಲ ಕಾರ್ಮಿಕರ ಯೋಜನೆಯ ಕ್ಷೇತ್ರಾಧಿಕಾರಿ ಪಿ.ಎಂ.ಈಶ್ವರಯ್ಯ, ಚೈಲ್ಡ್‍ಲೈನ್ ಸಿಬ್ಬಂದಿಗಳಾದ ಚಂದ್ರಕಲಾ, ಕಾರ್ತಿಕ ಹಾಗೂ ಇನ್ನೀತರರು ಹಾಜರಿದ್ದರು.