BP NEWS: ಬಳ್ಳಾರಿ: ಅಕ್ಟೋಬರ್.11: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಅಭಿಯಾನ
ನಿಮಿತ್ತ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು 3ನೇ ಶನಿವಾರದಂದು ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಆ ಗ್ರಾಮದ ಸಮಸ್ಯೆ/ಮನವಿಗಳ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಹೋಬಳಿಯ ನಡವಿ ಗ್ರಾಮದಲ್ಲಿ ಅ.15ರಂದು ಗ್ರಾಮವಾಸ್ತವ್ಯ ನಡೆಸಿ ಗ್ರಾಮಸ್ಥರ ದೂರು-ದುಮ್ಮಾನ ಆಲಿಸಲಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.
ವಿವಿಧೆಡೆ ಗ್ರಾಮ ವಾಸ್ತವ್ಯದ ವಿವರ: ಅ.15ರಂದು ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಹೋಬಳಿಯ ನಡವಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಸಿರುಗುಪ್ಪ ತಾಲೂಕಿನ ತಹಶೀಲ್ದಾರರು ವಾಸ್ತವ್ಯ ನಡೆಸಲಿದ್ದಾರೆ.
ಬಳ್ಳಾರಿ ತಾಲೂಕಿನ ರೂಪನಗುಡಿ ಹೋಬಳಿಯ ಎತ್ತಿನಬೂದಿಹಾಳು ಗ್ರಾಮದಲ್ಲಿ ಬಳ್ಳಾರಿ ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಕುರುಗೋಡು ತಾಲೂಕಿನ ಕುರುಗೋಡು ಹೋಬಳಿಯ ಮುಷ್ಟಗಟ್ಟೆ ಗ್ರಾಮದಲ್ಲಿ ಕುರುಗೋಡು ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಂಡೂರು ತಾಲೂಕಿನ ತೋರಣಗಲ್ಲು ಹೋಬಳಿಯ ಜೋಗ ಗ್ರಾಮದಲ್ಲಿ ಸಂಡೂರು ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕಂಪ್ಲಿ ತಾಲೂಕಿನ ಕಂಪ್ಲಿ ಹೋಬಳಿಯ ಬಳ್ಳಾಪುರ ಗ್ರಾಮದಲ್ಲಿ ಕಂಪ್ಲಿ ತಾಲೂಕಿನ ತಹಶೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವ್ಯಾಸ್ತವ್ಯ ಮಾಡಲಿದ್ದಾರೆ.
ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಹಾಗೂ ಅಧಿಕಾರಿಗಳು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.