BP NEWS: ಬಳ್ಳಾರಿ: ಅಕ್ಟೋಬರ್.07: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ಬೀದಿ ನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಬೀದಿ ನಾಟಕ ಮತ್ತು ಜಾನಪದ ಸಂಗೀತ ಕಲಾತಂಡಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 3 ಬೀದಿ ನಾಟಕ ಹಾಗೂ 3 ಜಾನಪದ ಸಂಗೀತ ಕಲಾತಂಡಗಳನ್ನು ಆಯ್ಕೆ ಮಾಡಲಾಗುವುದು. ಪ್ರತಿ ಬೀದಿ ನಾಟಕ ತಂಡದಲ್ಲಿ 8 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರಿರಬೇಕು. ಪ್ರತಿ ಜಾನಪದ ಸಂಗೀತ ಕಲಾತಂಡದಲ್ಲಿ 3 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಒಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರಿರಬೇಕು.
ಅರ್ಜಿ ಸಲ್ಲಿಸುವ ಕಲಾತಂಡಗಳು ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಕಲಾವಿದರು ಬಳ್ಳಾರಿ ಜಿಲ್ಲೆಯ ನಿವಾಸಿಗಳಾಗಿರಬೇಕು. ಅರ್ಜಿ ಸಲ್ಲಿಸಲು ಅ.17 ಕೊನೆ ದಿನವಾಗಿದೆ. ಅ.19ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ ಏರ್ಪಡಿಸಲಾಗಿದ್ದು, ಕಲಾತಂಡಗಳು ಕಡ್ಡಾಯವಾಗಿ ಪ್ರದರ್ಶನ ನೀಡಬೇಕು. ಸಂದರ್ಶನಕ್ಕೆ ಹಾಜರಾಗುವ ಕಲಾತಂಡಗಳು ಅಥವಾ ಕಲಾವಿದರು ತಮ್ಮ ಖರ್ಚು ವೆಚ್ಚದಲ್ಲಿಯೇ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.