ಅಕ್ಟೋಬರ್ 2 ರಿಂದ 10 ರವರೆಗೆ ಬಿಡಿಎಎ ಗ್ರೌಂಡ್‍ನಲ್ಲಿ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ

0
127

BP NEWS: ಬಳ್ಳಾರಿ: ಸೆಪ್ಟೆಂಬರ್.28: ಜಿಲ್ಲಾ ಆಡಳಿತ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ಫುಟ್ಬಾಲ್ ಕ್ಲಬ್‍ಗಳ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 2 ರಿಂದ 10 ರವರೆಗೆ ಪ್ರತಿ ದಿನ ಸಂಜೆ 4 ರಿಂದ 8 ಗಂಟೆಯವರೆಗೆ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಬಳ್ಳಾರಿ ಫುಟ್ಬಾಲ್ ಲೀಗ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿಯವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಫುಟ್ಬಾಲ್ ಲೀಗ್ ಪಂದ್ಯಾವಳಿಗಳ ಕುರಿತಂತೆ ಏರ್ಪಡಿಸಲಾದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ಮಾತನಾಡಿದರು. ಬಳ್ಳಾರಿ ಜಿಲ್ಲೆಯಾದ್ಯಂತ ಒಟ್ಟು 16 ತಂಡಗಳು ಈ ಲೀಗ್‍ನಲ್ಲಿ ಭಾಗವಹಿಸಲಿವೆ. ಭಾಗವಹಿಸಿದ ಎಲ್ಲಾ ತಂಡಗಳಿಗೆ ವಾಸ್ತವ್ಯ ಸೇರಿದಂತೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಪಂದ್ಯಾವಳಿಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಇರುತ್ತದೆ. ಈ ಮೂಲಕ ಇಂದಿನ ಯುವಕರಲ್ಲಿ ಕ್ರೀಡಾಸಕ್ತಿ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಪಂದ್ಯಾವಳಿಗೆ ಬೇಕಾದ ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ, ಬಂದೋಬಸ್ತ್, ತುರ್ತು ಆರೋಗ್ಯ ಚಿಕಿತ್ಸೆ ಸೌಲಭ್ಯ, ತೀರ್ಪುಗಾರರಿಗೆ ವಾಸ್ತವ್ಯ ಸೇರಿದಂತೆ ಹೊನಲು ಬೆಳಕಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಮಾಡಬೇಕಾಗಿದೆ ಎಂದ ಅವರು ಸಂಬಂಧಿಸಿದ ಎಲ್ಲಾ ಇಲಾಖೆಗಳು ಅಗತ್ಯವಿರುವ ಎಲ್ಲಾ ಸಹಕಾರ ನೀಡಲು ಸೂಚನೆ ನೀಡಿದರು.


ಪಂದ್ಯಗಳನ್ನು ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಸೂಕ್ತ ಆಸನದ ವ್ಯವಸ್ಥೆ ಹಾಗೂ ಬಿಡಿಎ ಮೈದಾನದಲ್ಲಿ ಅಗತ್ಯವಿರುವ ದುರಸ್ಥಿಯನ್ನು ನಿರ್ಮಿತಿ ಕೇಂದ್ರದಿಂದ ಮಾಡಲು ತಿಳಿಸಿದ ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಇತರೆ ತಾಲ್ಲೂಕುಗಳಲ್ಲಿ ಫುಟ್ಬಾಲ್ ಮೈದಾನಗಳನ್ನು ನಿರ್ಮಿಸುವ ಮೂಲಕ ಹೆಚ್ಚಿನ ಕ್ರೀಡಾಪಟುಗಳನ್ನು ಸಿದ್ದಪಡಿಸುವ ಉದ್ದೇಶ ಹೊಂದಲಾಗಿದೆ. ಈಗ ನಡೆಸಲು ಉದ್ದೇಶಿಸಿರುವ ಫುಟ್ಬಾಲ್ ಕ್ರೀಡೆ ಇಲ್ಲಿಗೆ ಮಾತ್ರ ಸೀಮಿತವಾಗದೆ, ನಿರಂತರವಾಗಿ ನಡೆಯುವ ಮೂಲಕ ಯುವಕರನ್ನು ಕ್ರೀಡೆಯತ್ತ ಸೆಳೆಯುವ ಕೆಲಸಗಳನ್ನು ಮಾಡಬೇಕಾಗಿದೆ. ಕ್ರೀಡೆಗಳಿಗ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಯಾವುದೇ ಅನುದಾನದ ಕೊರತೆ ಇಲ್ಲ, ಆಸಕ್ತಿ ಮೂಡಬೇಕಷ್ಟೆ ಎಂದರು.
ಸಭೆಯಲ್ಲಿ ಸಹಾಯಕ ಆಯುಕ್ತ ಡಾ; ಆಕಾಶ್ ಶಂಕರ್ ಪಂದ್ಯಾವಳಿಗಳ ಕುರಿತು ವಿವರ ಹಾಗೂ ರೂಪರೇಷಗಳ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ಜಿ.ಲಿಂಗಮೂರ್ತಿ, ಅಪರ ಜಿಲ್ಲಾಧಿಕಾರಿ ಮಂಜುನಾಥ, ಪಾಲಿಕೆ ಆಯುಕ್ತ ಜಿ.ರುದ್ರೇಶ, ಕ್ರೀಡಾಧಿಕಾರಿ ಹರಿಸಿಂಗ್ ರಾಥೋಡ್, ಮಾಜಿ ಫುಟ್ಬಾಲ್ ಕ್ರೀಡಾಪಟುಗಳಾದ ಕೆ.ಚಂದ್ರಶೇಖರ್, ಅಬ್ದುಲ್ ಮುನಾಫ್, ಎನ್.ರಾಮಾಂಜನೇಯಲು, ಕೋಚ್ ಶಾಂತಿ, ಜಾಕೀರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here