ಜಾಗೃತಿ ನಗರದಲ್ಲಿ ಕಾಣಿಸಿಕೊಂಡ ಮೊಸಳೆ-ಆತಂಕದಲ್ಲಿ ನಾಗರಿಕರು

0
482

ಬಳ್ಳಾರಿ,ಸೆ.7-ಮಹಾನಗರ ಪಾಲಿಕೆ ವ್ಯಾಪ್ತಿಯ ಜಾಗೃತಿ ನಗರದಲ್ಲಿರುವ ನಲ್ಲಚೆರುವು ಹತ್ತಿರದ ಕುಂಟೆಯೊಂದರಲ್ಲಿ ಮೊಸಳೆಯೊಂದು ಗೋಚರಿಸಿದ್ದು ನಾಗರಿಕರು ಆತಂಕಗೊಂಡಿದ್ದಾರೆ.


ಸತತ ಒಂದು ವಾರದಿಂದ ಸುರಿದ ಮಳೆಯಿಂದಾಗಿ ನೀರಿನ ಕುಂಟೆ ಭರ್ತಿಯಾಗಿ ಬಯಲು ಜಾಗೆಯಲ್ಲಿ ನೀರು ಯಥೇಚ್ಛವಾಗಿ ಸಂಗ್ರಹಣೆಗೊಂಡಿದೆ. ಇಂದು ಮುಂಜಾನೆ ಸಹಜವಾಗಿ ಜನರು ಮನೆಯಿಂದ ಆಚೆ ಬಂದಾಗ ಮೊಸಳೆಯೊಂದು ನೀರಿನಲ್ಲಿ ಗೋಚರಿಸುವುದು ಕಂಡು ಬಂದಿದೆ. ಈ ಕುಂಟೆಯ ಬಳಿಯೇ ಶಾಲೆಯೊಂದಿದ್ದು ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಜೊತೆಗೆ ಟೀಚರ್ಸ್ ಕಾಲೋನಿ ಹಾಗೂ ಭಟ್ಟಿ ಪ್ರದೇಶ ಇರುವುದರಿಂದ ಇಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ಮಗ್ನರಾಗಿರುವ ಜನರಿಗೆ ಮೊಸಳೆ ಕಾಣಿಸಿಕೊಂಡು ಆತಂಕ ಉಂಟು ಮಾಡಿದೆ.
ಹತ್ತಿರದಲ್ಲಿಯೇ ಅಬ್ದುಲ್ ತವಾಫ್ ಮಸೀದಿಯೂ ಇದೆ. ಪ್ರಾರ್ಥನೆಗಾಗಿ ಆಗಮಿಸುವ ಭಕ್ತರಿಗೂ ಆತಂಕ ಎದುರಾಗಿದೆ. ಸುತ್ತ ಮುತ್ತಲೂ ಮನೆಗಳಿದ್ದು ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯುವ ಸಂಭವವಿದೆ. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಮೊಸಳೆ ಹಿಡಿದು ಬೇರೆಡೆ ಸಾಗಿಸುವಂತೆ ಸ್ಥಳೀಯ ನಾಗರಿಕರು ಕೋರಿದ್ದಾರೆ.
ಈ ಕುರಿತಂತೆ ಮಾಧ್ಯಮದವರು ಅರಣ್ಯ ಇಲಾಖೆ ಅಧಿಕಾರಿ ರಾಘವೇಂದ್ರ ಅವರನ್ನು ಸಂಪರ್ಕಿಸಿದ್ದು, ಕೂಡಲೇ ತಮ್ಮ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಮೊಸಳೆ ಹಿಡಿಯುವುದಾಗಿ ಭರವಸೆ ನೀಡಿದ್ದಾರೆ.
——

LEAVE A REPLY

Please enter your comment!
Please enter your name here