ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ವಿಧಿವಶ

0
119

BP NEWS: ಬೆಂಗಳೂರು: ಸಪ್ಟೆಂಬರ್.06:  ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ(61) ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಡಾಲರ್ಸ್ ಕಾಲೋನಿಯ ನಿವಾಸದಲ್ಲಿದ್ದಾಗ ಎದೆನೋವು ಕಾಣಿಸಿಕೊಂಡು ಬಾತ್‌ರೂಮ್‌ನಲ್ಲಿ ಕುಸಿದುಬಿದ್ದಿದ್ದರು. ಈ ವೇಳೆ ತಕ್ಷಣವೇ ಕುಟುಂಬಸ್ಥರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ ಸಚಿವ ಉಮೇಶ್ ಕತ್ತಿ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ತಡ ರಾತ್ರಿ ಸಚಿವ ಉಮೇಶ್ ಕತ್ತಿ ವಿಧಿವಶರಾಗಿದ್ದಾರೆ.

ರಾಮಯ್ಯ ಅಸ್ಪತ್ರೆಗೆ ಆರೋಗ್ಯ ಸಚಿವ ಡಾ. ಸುಧಾಕರ್, ಸಚಿವ ಮುನಿರತ್ನ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕಂದಾಯ ಸಚಿವ ಅಶೋಕ್ ಭೇಟಿ ನೀಡಿದ್ದಾರೆ. ತಮ್ಮ ಎಲ್ಲಾ ಕಾರ್ಯಕ್ರಮ ಮೊಟಕುಗೊಳಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಆಸ್ಪತ್ರೆಯ ಬಳಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ, ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ಭದ್ರತೆ ನೀಡಲಾಗಿದೆ. ಮಳೆ ಹಿನ್ನೆಲೆ ಸಿಟಿ ರೌಂಡ್ಸ್​ನಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಕೆಲವೇ ನಿಮಿಷಗಳಲ್ಲಿ ಆಗಮಿಸಲಿದ್ದಾರೆ.

ರಾಮಯ್ಯ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಭೇಟಿ ಬಳಿಕ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಪಾರ್ಥಿವ ಶರೀರ ಶಿಫ್ಟ್‌ ಮಾಡಲಾಗುತ್ತೆ. ಬೆಳಗ್ಗೆ 9 ಗಂಟೆಗೆ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನು ಬೆಂಗಳೂರು ನಿವಾಸದಿಂದ ಬೆಳಗಾವಿ ಏರ್‌ಪೋರ್ಟ್‌ಗೆ ರವಾನಿಸಿ ಅಲ್ಲಿಂದ ತಿಲಕವಾಡಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತೆ. ತಿಲಕವಾಡಿಯ ಶಿವಬಸವನಗರದ ನಿವಾಸದಲ್ಲಿ ಅಂತಿಮ ದರ್ಶನ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.

ಟ್ವೀಟ್‌ ಮಾಡಿ ಸಚಿವ ಉಮೇಶ್‌ ಕತ್ತಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಶ್ರೀ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ,ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here