ವಿಜಯನಗರ ಜಿಲ್ಲೆಯಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ-2022

0
96

BP NEWS: ಹೊಸಪೇಟೆ(ವಿಜಯನಗರ): ಸೆಪ್ಟೆಂಬರ್ .01: ಬಾಣಂತಿಯರ, ತಾಯಂದಿರ ಹಾಗೂ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು, ಅವರಿಗೆ ದಿನನಿತ್ಯದ ಆಹಾರದಲ್ಲಿನ ಪೌಷ್ಠಿಕಾಂಶ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಪೋಷಣ್ ಮಾಸಾಚರಣೆ-2022 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಆಗಿರುವ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹುಲ್ಲೂರು ಹೇಮಲತಾ ಬಸಪ್ಪ ಅವರು ಹೇಳಿದರು.


ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಜಯನಗರ ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ಸಂಯುಕ್ತಾಶ್ರಯದಲ್ಲಿ ಹೊಸಪೇಟೆಯ ಜಿಲ್ಲಾಕ್ರೀಡಾಂಗಣದ ಒಳಾಂಗಣ ಸಭಾಂಗಣದಲ್ಲಿ ಗುರುವಾರದಂದು ಹಮ್ಮಿಕೊಂಡಿದ್ದ “ರಾಷ್ಟ್ರೀಯ ಪೋಷಣ್ ಮಾಸಾಚರಣೆ-2022” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಯಾವುದೇ ಒಂದು ದೇಶ ಪ್ರಗತಿ ಹೊಂದಲು, ಅಭಿವೃದ್ಧಿ ಸಾಧಿಸಲು ಹಾಗೂ ಶಕ್ತಿಯುತ ರಾಷ್ಟ್ರವಾಗಬೇಕೆಂದರೆ ಪೌಷ್ಠಿಕಾಂಶಯುಳ್ಳ ಆಹಾರ ಸೇವನೆಯಿಂದ ಮಾತ್ರ ಸ್ವಸ್ಥ ಸಮಾಜ ಮತ್ತು ಆರೋಗ್ಯವಂತ ಸಮಾಜವನ್ನು ಸ್ಥಾಪಿಸಲು ಸಾಧ್ಯ ಎಂದು ಅವರು ಹೇಳಿದರು.
ಅಪೌಷ್ಠಿಕ ಆಹಾರದಿಂದ ಮರಣ ಹೊಂದುವುದನ್ನು ತಡೆಯುವುದು ಹಾಗೂ ಪೌಷ್ಠಿಕ ಆಹಾರ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯಕರವಾಗಿ ಜೀವಿಸುವ ಉದ್ದೇಶದಿಂದ ಸರ್ಕಾರವು ಈ ರಾಷ್ಟ್ರೀಯ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.


ಬಾಣಂತಿಯರಿಗೆ 3 ತಿಂಗಳಿನಿಂದ ಹೆರಿಗೆ ಆಗುವವರೆಗೂ ಅಂಗನವಾಡಿ ಕೇಂದ್ರಗಳಿಂದ ಪೌಷ್ಠಿಕಾಂಶವುಳ್ಳ ಆಹಾರವನ್ನು ನೀಡಲಾಗುತ್ತಿದ್ದು, ಗರ್ಭಿಣಿಯರಿಗೆ ಹೆರಿಗೆ ಮುಂಚೆ ಹಾಗೂ ಹೆರಿಗೆ ನಂತರ ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಮಾಹಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿದ್ಧಪಡಿಸಿ ಅಂಗನವಾಡಿ ಕೇಂದ್ರಗಳ ಮೂಲಕ ಬಾಣಂತಿಯರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿಯಲ್ಲಿ ರೂ.5 ಸಾವಿರ ಹಾಗೂ ಆರೋಗ್ಯ ಇಲಾಖೆಯವರ ಜನನಿ ಸುರಕ್ಷಾ ಯೋಜನೆಯಡಿ ರೂ.1 ಸಾವಿರ ಸಹಾಯಧನವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಬಾಣಂತಿಯರಿಗೆ ಹಾಗೂ ಶಿಶುಗಳಿಗೆ ಪೌಷ್ಠಿಕಾಂಶಯುಳ್ಳ ಆಹಾರ ಮತ್ತು ಮಕ್ಕಳಿಗೆ ಕಾಲ ಕಾಲಕ್ಕೆ ಚುಚ್ಚುಮದ್ದುಗಳನ್ನು ನೀಡುವುದರ ಮುಖಾಂತರ ಆರೋಗ್ಯಕರವಾದ ಮತ್ತು ಶಕ್ತಿಯುತ ರಾಷ್ಟ್ರವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.


ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರದಿಂದ ವಿತರಣೆಯಾಗುವ ಆಹಾರ ಸಾಮಾಗ್ರಿಗಳಿಂದ ಪೌಷ್ಠಿಕತೆಯುಕ್ತ ಆಹಾರ ತಯಾರಿಸಿ ಸೇವಿಸುವುದರ ಮೂಲಕ ಪೌಷ್ಠಿಕತೆ ಪ್ರಮಾಣ ಹೆಚ್ಚಿಸಿಕೊಳ್ಳಿ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಬೋಯರ್ ನಾರಾಯಣರಾವ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಆಯುಷ್ ಅಧಿಕಾರಿಗಳೊಂದಿಗೆ ಪ್ರತಿ ಮನೆಯಲ್ಲಿ ಯೋಗ ಮಾಡುವುದು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಯೋಗ ಮಾಡಲು ತರಬೇತಿಯನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಯಂದಿರಲ್ಲಿ ಹಾಗೂ ಮಕ್ಕಳಲ್ಲಿ ಪ್ರತಿ ವರ್ಷ ಶೇ.2ರಷ್ಟು ರಕ್ತಹಿನತೆಯನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದ ಅವರು, ಸ್ಟಂಟಿಂಗ್(ಕುಬ್ಜತನ) ಹಾಗೂ ವೆಸ್ಟಿಂಗ್ (ಎತ್ತರಕ್ಕೆ ತಕ್ಕ ತೂಕ ಕಡಿಮೆ ಇರುವುದು)ನ್ನು ಶೇ.2ರಷ್ಟು ಕಡಿಮೆ ಮಾಡವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ದಿನನಿತ್ಯ ಆಹಾರದಲ್ಲಿನ ಪೌಷ್ಠಿಕಾಂಶದ ಮಹತ್ವವನ್ನು ತಿಳಿಸುವುದು.


ಪೋಷಣ್ ವಾಟಿಕ ಹೆಸರಿನಲ್ಲಿ ಕಿಚನ್ ಗಾರ್ಡನ್‍ಗಳನ್ನು ಬೆಳೆಸಲು ಮಹಿಳೆಯರಿಗೆ ತಿಳುವಳಿಕೆಯನ್ನು ನೀಡುವುದು. ಈಗಾಗಲೇ ಜಿಲ್ಲೆಯಲ್ಲಿ 437 ಅಂಗನವಾಡಿ ಕೇಂದ್ರಗಳ ಕಾಂಪೌಂಡ್‍ಗಳಲ್ಲಿ ಪೌಷ್ಠಿಕ ಕೈತೋಟಗಳನ್ನು ಮಾಡಿಸಲಾಗಿದ್ದು, ನರೇಗಾ ಯೋಜನೆಯಲ್ಲಿ ಮಹಿಳೆಯರು ತಮ್ಮ ತಮ್ಮ ಮನೆಯಲ್ಲಿ ಕೈತೋಟಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಶಾಲೆಯಲ್ಲಿನ ಮಕ್ಕಳಿಗೆ ಪೌಷ್ಠಿಕಾಂಶದ ಬಗ್ಗೆ, ಶುಚಿತ್ವದ ಬಗ್ಗೆ, ಕೈತೊಳೆಯುವ ಬಗ್ಗೆ ಹಾಗೂ ವೈಯಕ್ತಿಕ ನೈರ್ಮಲ್ಯದ ಕುರಿತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತಮಗೆ ಸಂಬಂಧಿಸಿದ ಶಾಲೆಗಳಿಗೆ ಹೋಗಿ ಶಾಲೆಯ ಶಿಕ್ಷಕರನ್ನು ಒಳಗೊಂಡತೆ ತಿಳುವಳಿಕೆ ಮೂಡಿಸಲು ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದರು.
ಪೋಷಣ್ ಪಂಚಾಯತಿಗಳಿಂದ ಗರ್ಭಿಣಿ, ಬಾಣಂತಿಯರು ಹಾಗೂ ಪ್ರಾಯ ಪೂರ್ವ ಬಾಲಕಿಯರಿಗೆ ಅಂಗನವಾಡಿ ಕ್ರೇಂದ್ರಗಳಲ್ಲಿ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದ ಜಿಪಂ ಸಿಇಒ ಹರ್ಷಲ್ ಬೋಯರ್ ನಾರಾಯಣ್‍ರಾವ್ ಅವರು, ತಾಯಂದಿಯರಿಗೆ ಚೈನತ್ಯ ಮೂಡಿಸಲು ಉತ್ತಮ ಮಗು ಕಾರ್ಯಕ್ರಮವನ್ನು ಗ್ರಾಮಗಳಲ್ಲಿ ನಡೆಸಿ ಬಹುಮಾನ ವಿತರಿಸುವುದು. ಇದರಿಂದ ಪ್ರತಿ ತಾಯಂದರಿಗೆ ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಉತ್ಸಾಹ ಮೂಡುತ್ತದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಆಯೋಜಿಸಲಾದ ಪೌಷ್ಠಿಕ ಮೇಳದಲ್ಲಿ ಆಹಾರ ಸಾಮಾಗ್ರಿಗಳಿಂದ ತಯಾರಿಸಬಹುದಾದ ವಿವಿಧ ಬಗೆಯ ತಿನಿಸುಗಳನ್ನು ಅಂಗನವಾಡಿ ಕಾರ್ಯಕರ್ತೆಯರು ತಯಾರಿಸಿ ಪ್ರದರ್ಶಿಸಿದರು.


“ರಾಷ್ಟ್ರೀಯ ಪೋಷಣ್ ಮಾಸಾಚರಣೆ-2022” ಜಾಥಾಕ್ಕೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಹುಲ್ಲೂರು ಹೇಮಲತಾ ಬಸಪ್ಪ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಅಪರ ಸಿವಿಲ್ ನ್ಯಾಯಾಧೀಶರಾದ ತೃಪ್ತಿಧರಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೊಟ್ರೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆನಾಗಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ್‍ನಾಯ್ಕ್, ಆರ್.ಸಿ.ಹೆಚ್. ಜಿಲ್ಲಾಧಿಕಾರಿ ಡಾ.ಜಂಭಯ್ಯ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here