ಕೋಳೂರು ಏತನೀರಾವರಿ ಯೋಜನೆ(ಡಿ-7 ಕಾಲುವೆ)ಪುನಶ್ಚೇತನ ಕಾಮಗಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಿಂದ ಲೋಕಾರ್ಪಣೆ

0
127

BP NEWS: ಬಳ್ಳಾರಿ: ಸೆಪ್ಟಂಬರ್.1: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಬಳಿ 7.13 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೋಳೂರು ಏತನೀರಾವರಿ(ಡಿ-7 ಕಾಲುವೆ) ಪುನಶ್ಚೇತನಾ ಕಾಮಗಾರಿಯನ್ನು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಗುರುವಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು ಅವರು ಈ ಕೋಳೂರು ಏತನೀರಾವರಿ ಯೋಜನೆಯ ವಿತರಣಾ ಕಾಲುವೆ-07ರ ಕೊನೆಯ ಭಾಗದ ನೀರಾವರಿ ಭಾದಿತ ಅಚ್ಚುಕಟ್ಟು ಪ್ರದೇಶವಾಗಿರುವ ಬೈಲೂರು,ಸಿಂಧಿಗೇರಿ,

ಶಾನವಾಸಪುರ,ಡಿ.ಕಗ್ಗಲ್ಲು,ಕೊಂಚಿಗೇರಿ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಸುಮಾರು 3750 ಎಕರೆ ಜಮೀನು ಪ್ರದೇಶಕ್ಕೆ ಜುಲೈನಿಂದ ಡಿಸೆಂಬರ್‍ವರೆಗೆ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ. ಈ ಭಾಗದ ರೈತರ ಬಹುದಿನಗಳ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿದೆ ಎಂದರು.
ತುಂಗಾಭದ್ರಾ ಬಲದಂಡೆ ಮೇಲ್ಪಟ್ಟ ಕಾಲುವೆಯ ವಿತರಣಾ ಕಾಲುವೆ-07ರ ಕೊನೆಯ ಭಾಗದ ನೀರಾವರಿ ಬಾಧಿತ ಜಮೀನುಗಳಿಗೆ ಸಮರ್ಪಕ ನೀರು ಒದಗಿಸಲು ಅನಾನುಕೂಲವಾಗುತ್ತಿರುವುದನ್ನು ಮನಗಂಡು ಮತ್ತು ಐದು ಗ್ರಾಮಗಳ 3750 ಎಕರೆ ಜಮೀನು ಪ್ರದೇಶಕ್ಕೆ ನೀರು ಸರಬರಾಜು ವ್ಯತ್ಯಯ ಉಂಟಾಗಿರುವುದನ್ನು ಗಮನಿಸಿ ಕೋಳೂರು ಹಳ್ಳ(ತುಂಗಾಭದ್ರಾ ಯೋಜನೆಯ ಪುನರುತ್ಪತ್ತಿ ನೀರು)ದಲ್ಲಿ ಹರಿಯುತ್ತಿರುವ ಪುನರುತ್ಪತ್ತಿ ನೀರನ್ನು ಬಳಸಿಕೊಂಡು ಏತನೀರಾವರಿ ಪುನಶ್ಚೇತನಾ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ 50 ಕ್ಯೂಸೆಕ್ ನೀರು ಬೇಕಾಗಲಿದೆ ಎಂದರು.


ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅನೇಕ ಏತನೀರಾವರಿ ಯೋಜನೆಗಳ ಮೂಲಕ ರೈತರ ಜಮೀನುಗಳಿಗೆ ನೀರಾವರಿಗೆ ಒಳಪಡಿಸುವ ಕೆಲಸ ನಮ್ಮ ಸರಕಾರ ಮಾಡುತ್ತಿದೆ ಎಂದು ಹೇಳಿದ ಅವರು ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಅನೇಕ ಏತನೀರಾವರಿ ಯೋಜನೆಗಳಿಗೆ ಸಾಕಷ್ಟು ಪ್ರಮಾಣದ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡುವುದರ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ;ಈ ಮೂಲಕ ರೈತರ ಕಲ್ಯಾಣಕ್ಕೆ ಶ್ರಮಿಸುತ್ತಿದೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ,ರೈತ ವಿದ್ಯಾನಿಧಿ ಸೇರಿದಂತೆ ಅನೇಕ ರೈತಪರ ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೊಳಿಸಿವೆ ಎಂದು ಅವರು ಹೇಳಿದರು.


ಮೀಸಲಾತಿ ವಿಷಯದಲ್ಲಿ ಸಿಹಿ ಸುದ್ದಿ: ಮೀಸಲಾತಿ ವಿಷಯದಲ್ಲಿ ನನ್ನ ವಾಲ್ಮೀಕಿ ಸಮುದಾಯಕ್ಕೆ ಮತ್ತು ಪರಿಶಿಷ್ಟ ಜಾತಿ ಸಮುದಾಯಕ್ಕೆ ರಾಜ್ಯ ಸರಕಾರ ಶೀಘ್ರ ಸಿಹಿಸುದ್ದಿ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಶೇ.15ರಷ್ಟು ಮೀಸಲು ಮತ್ತು ಪರಿಶಿಷ್ಟ ವರ್ಗಕ್ಕೆ ಶೇ.3ರಷ್ಟು ಮೀಸಲಾತಿ ಇದ್ದು,ಅದನ್ನು ಕ್ರಮವಾಗಿ ಪರಿಶಿಷ್ಟ ಸಮುದಾಯಕ್ಕೆ ಶೇ.15ರಿಂದ 17 ಮತ್ತು ಪರಿಶಿಷ್ಟ ವರ್ಗಗಳ ಸಮುದಾಯಕ್ಕೆ ಶೇ.3ರಿಂದ 7.5ಕ್ಕೆ ಮಿಸಲಾತಿ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಶೀಘ್ರ ಸಿಹಿಸುದ್ದಿಯನ್ನು ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಜೆ.ಶಾಂತಾ,ಕೋಳೂರು ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಆಗಲೂರಪ್ಪ, ಕರ್ನಾಟಕ ನೀರಾವರಿ ನಿಗಮದ ಮುನಿರಾಬಾದ್ ನೀರಾವರಿ ಕೇಂದ್ರ ವಲಯದ ಮುಖ್ಯ ಅಭಿಯಂತರರಾದ ದುರುಗಪ್ಪ.ಕೆ., ಕರ್ನಾಟಕ ನೀರಾವರಿ ನಿಗಮದ ಮುನಿರಾಬಾದ್ ತುಂಗಾಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಲ್.ಬಸವರಾಜ, ಕರ್ನಾಟಕ ನೀರಾವರಿ ನಿಗಮದ ನಂ.06 ಕಾಲುವೆ ವಿಭಾಗದ ಕಾರ್ಯಪಾಲಕ ಎಂಜನಿಯರ್ ಸುರೇಶ, ಕರ್ನಾಟಕ ನೀರಾವರಿ ನಿಗಮದ ನಂ.2 ಎಚ್‍ಎಲ್‍ಸಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜನಿಯರ್ ಸುರೇಂದ್ರರೆಡ್ಡಿ, ಸಹಾಯಕ ಎಂಜನಿಯರ್ ಕಿರಣ್,ಎಂಜನಿಯರ್‍ಗಳಾದ ಗುರುರಾಜ್,ಪ್ರಿಯದರ್ಶಿನಿ ಸಿಂಧ್ಯಾ,ಕರ್ನಾಟಕ ನೀರಾವರಿ ನಿಗಮದ ಜಿ.ಕೆ.ರಾಮಕೃಷ್ಣ ಸೇರಿದಂತೆ ಅನೇಕರು ಇದ್ದರು.

LEAVE A REPLY

Please enter your comment!
Please enter your name here