ನವ ಬಳ್ಳಾರಿ ನಿರ್ಮಾಣಕ್ಕೆ ಸರಕಾರವು ಬದ್ಧ “ಕ್ಲಾಕ್ ಟವರ್” ಬಳ್ಳಾರಿಗೆ ಮೆರುಗು ನೀಡಲಿದೆ:ಶಾಸಕ ಜಿ.ಸೋಮಶೇಖರರೆಡ್ಡಿ

0
91

BP NEWS: ಬಳ್ಳಾರಿ: ಆಗಸ್ಟ್.24: ಬಳ್ಳಾರಿ ನಗರದ ಮಧ್ಯಭಾಗವಾದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ 140ಅಡಿ ಎತ್ತರದ ನೂತನ ಗಡಿಯಾರ ಸ್ಥಂಭ(ಕ್ಲಾಕ್ ಟವರ್) ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದು ಬಳ್ಳಾರಿ ನಗರಕ್ಕೆ ಇನ್ನಷ್ಟು ಬೆಳವಣಿಗೆ ಮತ್ತು ಸುಂದರೀಕರಣಕ್ಕೆ ಸಾಕ್ಷಿಯಾಗಲಿದೆ ಎಂದು ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು.
ಬಳ್ಳಾರಿ ನಗರವನ್ನು ಸುಂದರೀಕರಣ ಮತ್ತು ಬೆಳವಣಿಗೆ ಮಾಡುವುದರೊಂದಿಗೆ ನವ ಬಳ್ಳಾರಿ ನಿರ್ಮಾಣಕ್ಕೆ ನಮ್ಮ ಸರಕಾರವು ಸದಾ ಬದ್ಧವಾಗಿದೆ; ಈ ನಿಟ್ಟಿನಲ್ಲಿ ನಮ್ಮ ಸರಕಾರ ಕ್ಲಾಕ್ ಟವರ್ ನಿರ್ಮಾಣಕ್ಕೆ ಮುಂದಾಗಿದೆ;ನಿರ್ಮಾಣ ಮಾಡುವುದಕ್ಕೆ ಮುಂಚೆ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಕಡೆಯಿಂದಲೂ ನಿರಾಪೇಕ್ಷಣಾ ಪತ್ರಗಳನ್ನು ಪಡೆಯಲಾಗಿದೆ; ಆದರೂ ಕೆಲವರು ರಾಜಕೀಯ ಉದ್ದೇಶದಿಂದ ವಿರೋಧಿಸುತ್ತಿದ್ದಾರೆ ಎಂದು ಅವರು ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ನೂತನ ಗಡಿಯಾರ ಸ್ಥಂಭ(ಕ್ಲಾಕ್ ಟವರ್) ನಿರ್ಮಾಣಕ್ಕೆ ಸಂಬಂಧಿಸಿದಂತೆ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.


ನೂತನ ಗಡಿಯಾರ ಸ್ಥಂಭ(ಕ್ಲಾಕ್ ಟವರ್)ವು 36*40 ಸುತ್ತಳತೆ ಹಾಗೂ 12 ಮೀ. ಸುತ್ತಳತೆಯಲ್ಲಿ ಸ್ಥಂಭವು ನಿರ್ಮಾಣವಾಗಲಿದ್ದು, ಕಾಮಗಾರಿಯು 3ರಿಂದ 4 ತಿಂಗಳೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಆಡಚಣೆಗಳು ಉಂಟಾಗುವುದಿಲ್ಲ ಎಂದು ತಿಳಿಸಿದ ಅವರು, ಮಹಾನಗರ ಪಾಲಿಕೆ ಮತ್ತು ಸಾರ್ವಜನಿಕರ ನಿರಾಕ್ಷೇಪಣೆ ಮೇರೆಗೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ 140ಅಡಿ ಎತ್ತರದ ನೂತನ ಗಡಿಯಾರ ಸ್ಥಂಭದಲ್ಲಿ ಲಿಫ್ಟ್ ವ್ಯವಸ್ಥೆಯು ಹೊಂದಿದ್ದು, ಸಾರ್ವಜನಿಕರು ಇಡೀ ನಗರವನ್ನು ಈ ಸ್ತಂಭದ ಮೇಲೇರಿ ವೀಕ್ಷಿಸಬಹುದು ಎಂದು ತಿಳಿಸಿದರು.
ಈಗಾಗಲೇ ಡಾ.ರಾಜ್‍ಕುಮಾರ್ ರಸ್ತೆಯ ಆಗಲೀಕರಣ ಕಾಮಗಾರಿಯು ಆರಂಭಗೊಂಡಿದ್ದು, ದುರ್ಗಮ್ಮ ದೇವಸ್ಥಾನ ಹತ್ತಿರದ ರೇಲ್ವೇ ಬ್ರಿಡ್ಜ್, ಮೋತಿ ಬ್ರಿಡ್ಜ್, ಸುಧಾ ಕ್ರಾಸ್ ಬಳಿಯ ರೇಲ್ವೇ ಫ್ಲೈ-ಓವರ್ ಬ್ರಿಡ್ಜ್ ಸೇರಿದಂತೆ ಕಾಮಗಾರಿಗೆ ಸಂಬಂಧಿಸಿದಂತೆ ಲೋಕೊಪಯೋಗಿ ಸಚಿವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆ ನಡೆಸಿದ್ದು, ಕೇಂದ್ರದ ಅನುಮತಿಗಾಗಿ ದೆಹಲಿಗೆ ತೆರಳಲಿದ್ದೇವೆ ಎಂದು ಅವರು ತಿಳಿಸಿದರು.


ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ 1965ರಲ್ಲಿ ಕ್ಲಾಕ್ ಟವರ್ ಅನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ನೀಲಂಸಂಜೀವರೆಡ್ಡಿ, ಕರ್ನಾಟಕದ ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಇದನ್ನು ಉದ್ಘಾಟಿಸಿದನ್ನು ಈ ಸಂದರ್ಭದಲ್ಲಿ ಅವರು ನೆನಪಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಇಬ್ರಾಹಿಂ,ಮೋತ್ಕರ್ ಶ್ರೀನಿವಾಸ್,ರಾಬಕೋವಿ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರರೆಡ್ಡಿ ಹಾಗೂ ಇನ್ನೀತರರು ಇದ್ದರು.

LEAVE A REPLY

Please enter your comment!
Please enter your name here