ಬಳ್ಳಾರಿಯಲ್ಲಿ ಸಂಭ್ರಮದ ಡಿ.ದೇವರಾಜ ಅರಸು ಜನ್ಮ ದಿನ ಆಚರಣೆ

0
95

BP NEWS: ಬಳ್ಳಾರಿ: ಆಗಸ್ಟ್.20: ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಮಹಾನ್ ನಾಯಕ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಬಣ್ಣಿಸಿದರು.
ಜಿಲ್ಲಾಡಳಿತ,ಜಿಪಂ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ರಾಘವಕಲಾಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಡಿ.ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಮತ್ತು ಆ ಸಮುದಾಯಗಳ ಮೀಸಲಾತಿ,ಶಿಕ್ಷಣ,ಸಾಮಾಜಿಕ ಪರಿವರ್ತನೆಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು ಅವರು.

ಭೂಸುಧಾರಣೆ ಕಾಯ್ದೆ,ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ರೂಪಿಸಿದ ಅನೇಕ ಯೋಜನೆಗಳು, ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಕರಣ ಸೇರಿದಂತೆ ಅನೇಕ ವಿಶಿಷ್ಟ ಮತ್ತು ಪರಿಣಾಮಕಾರಿಯಾದ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಇಡೀ ದೇಶದಲ್ಲಿಯೇ ಅರಸು ಅವರು ಶ್ರೇಷ್ಠ ಮತ್ತು ಜನಪ್ರಿಯ ಮುಖ್ಯಮಂತ್ರಿಗಳೆಂದು ಹೆಸರಾಗಿದ್ದರು ಎಂದು ಹೇಳಿದ ಅವರು,ಸಾಮಾಜಿಕ ನ್ಯಾಯದ ಹರಿಕಾರರಾಗಿರುವ ಅರಸು ಅವರ ಸಾಧನೆಗಳು ಸೂರ್ಯ-ಚಂದ್ರ ಇರುವವರೆಗೆ ಶಾಶ್ವತವಾಗಿರುತ್ತವೆ ಎಂದರು.


ಡಿ.ದೇವರಾಜು ಅರಸುರವರ ದೂರದೃಷ್ಟಿ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಳ ಬಗ್ಗೆ ಅವರಿಗಿದ್ದ ಬದ್ಧತೆಯ ಹಿನ್ನೆಲೆಯಲ್ಲಿ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ವಿಶಿಷ್ಟತೆಯಿಂದ ಆಚರಿಸಲಾಗುತ್ತಿದೆ. ಅರಸು ಅವರ ಹೆಸರಿನಲ್ಲಿ ಭವನಗಳು ಹಾಗೂ ಸಂಸ್ಥೆಗಳು ಹಾಗೂ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವರು ಮಾಡಿರುವ ಪುಣ್ಯದ ಕಾರ್ಯಗಳನ್ನು ನೆನಪಿಸಿಕೊಳ್ಳಲಾಗುತ್ತದೆ ಎಂದರು.
*ನಿಗಮಗಳ ಸೌಲಭ್ಯ ಸದುಪಯೋಗಪಡೆದುಕೊಳ್ಳಿ: ಹಿಂದುಳಿದ ವರ್ಗಗಳ ದೇವರಾಜು ಅರಸು ಅಭಿವೃದ್ಧಿ ನಿಗಮ,ವಿಶ್ವಕರ್ಮ,ನಿಜಶರಣ ಅಂಬಿಗರ ಚೌಡಯ್ಯ,ಉಪ್ಪಾರ ಸಮಾಜ,ಸವಿತಾ ಸಮಾಜ,ಮರಾಠ,ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ನಿಗಮ ಸೇರಿದಂತೆ ಹಿಂದುಳಿದ ವರ್ಗಗಳ ವಿವಿಧ ಅಭಿವೃದ್ಧಿ ನಿಗಮಗಳಡಿ ಸ್ವಾವಲಂಭಿ ಜೀವನ ನಡೆಸುವ ನಿಟ್ಟಿನಲ್ಲಿ ಸಾಲ-ಸೌಲಭ್ಯಗಳ ಕುರಿತು ಅರ್ಜಿ ಆಹ್ವಾನಿಸಲಾಗಿದ್ದು,ಅರ್ಹರು ಅವುಗಳ ಸೌಲಭ್ಯ ಪಡೆದುಕೊಂಡು ಸ್ವಾವಲಂಭಿ ಜೀವನ ನಡೆಸಬೇಕು ಎಂದು ಶಾಸಕ ಸೋಮಶೇಖರರೆಡ್ಡಿ ಅವರು ಕರೆ ನೀಡಿದರು.
ತ್ಯಾಗ-ಬಲಿದಾನಗಳ ಮೂಲಕ ಪಡೆದ ನಮ್ಮ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಮಾಹಿತಿಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.


ಜಿಲ್ಲಾಮಟ್ಟದ ಅರಸು ಪ್ರಶಸ್ತಿಗೆ ಎನ್.ಕುಮಾರಸ್ವಾಮಿ ಭಾಜನ: ಹಿಂದುಳಿದ ವರ್ಗಗಳ ಹರಿಕಾರರಾಗಿರುವ ಡಿ.ದೇವರಾಜು ಅರಸು ಅವರ ಧ್ಯೇಯೋದ್ಧೇಶಗಳನ್ನಿಟ್ಟುಕೊಂಡು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ಹಾಗೂ ಹಿಂದುಳಿದ ಸಮುದಾಯಗಳ ಶೈಕ್ಷಣಿಕ ಮತ್ತು ಆರ್ಥಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿದ ಬಳ್ಳಾರಿಯ ನಾಮಲ ಕುಮಾರಸ್ವಾಮಿ(ಎಗ್ ಕುಮಾರಸ್ವಾಮಿ) ಅವರಿಗೆ ಜಿಲ್ಲಾಮಟ್ಟದ ಡಿ.ದೇವರಾಜು ಅರಸು ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾಮಟ್ಟದ ಪ್ರಶಸ್ತಿ,ಪ್ರಶಂಸಾ ಪತ್ರ,ನೆನಪಿನ ಕಾಣಿಕೆ ಹಗೂ 50 ಸಾವಿರ ರೂ.ಗಳ ನಗದು ನೀಡಿ ಗೌರವಿಸಲಾಯಿತು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಎನ್.ಕುಮಾರಸ್ವಾಮಿ ಅವರನ್ನು ದಾನಶೂರಕರ್ಣ ಎಂದು ಬಣ್ಣಿಸಿದರು.
ಪ್ರಶಸ್ತಿ ಸ್ವೀಕರಿಸಿದ ಎನ್.ಕುಮಾರಸ್ವಾಮಿ ಅವರು ಪ್ರಶಸ್ತಿ ನಗದು 50 ಸಾವಿರ ರೂ. ಸೇರಿದಂತೆ ತಮ್ಮ ವೈಯಕ್ತಿಕ 50 ಸಾವಿರ ರೂ.ಗಳು ಸೇರಿಸಿ 1 ಲಕ್ಷ ರೂ.ಗಳನ್ನು ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನಗದು ಹಣವನ್ನು ವಿತರಿಸಿದರು.
ಕನ್ನಡ ವಿಶ್ವವಿದ್ಯಾಲಯದ ವಿಮರ್ಶಕರಾದ ಡಾ.ವೆಂಕಟಗಿರಿ ದಳವಾಯಿ ಅವರು ಡಿ.ದೇವರಾಜು ಅರಸು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಸುರೇಶಬಾಬು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.


ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಪಿ.ಪಾಲನ್ನ,ಹಿಂದುಳಿದ ವರ್ಗಗಳ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಮತ್ತು ಮುಖಂಡರುಗಳು, ಮಹಾನಗರ ಪಾಲಿಕೆಯ ಸದಸ್ಯರು,ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾಜಿರಾವ್,ಮುಖಂಡರಾದ ಕಲ್ಲುಕಂಭ ಪಂಪಾಪತಿ,ಹಾಲಪ್ಪ ಸೇರಿದಂತೆ ಅನೇಕರು ಇದ್ದರು.
ಡಿ.ದೇವರಾಜು ಅರಸು ಅವರ ಜನ್ಮದಿನಾಚರಣೆ ಅಂಗವಾಗಿ ರಾಘವ ಕಲಾಮಂದಿರದ ಆವರಣದಲ್ಲಿ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಕುಲಕಸುಬುಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಯೂ ಈ ಸಂದರ್ಭದಲ್ಲಿ ಗಮನಸೆಳೆಯಿತು.

LEAVE A REPLY

Please enter your comment!
Please enter your name here