ಬಳ್ಳಾರಿಯಲ್ಲಿ ಗಾಂಧಿಭವನ ಲೋಕಾರ್ಪಣೆ

0
88

BP NEWS: ಬಳ್ಳಾರಿ: ಆಗಸ್ಟ್.14: ಬಳ್ಳಾರಿಯಲ್ಲಿ ನಿರ್ಮಿಸಲಾಗಿರುವ ಗಾಂಧಿಭವನದ ಮೂಲಕ
ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ವಿಚಾರಧಾರೆಗಳನ್ನು ನಾಡಿನ ಜನರಿಗೆ ಪ್ರಚುರಪಡಿಸುವ ಕೆಲಸವಾಗಬೇಕು ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಗಾಂಧಿಭವನನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.


ಈ ಗಾಂಧಿಭವನವು ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳು, ಯುವಕರು, ಗಾಂಧೀವಾದಿಗಳು ಹಾಗೂ ವಿಚಾರವಾದಿಗಳು ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ತಾಣವಾಗಬೇಕಿದೆ. ಗಾಂಧೀಭವನದಲ್ಲಿ ಚಿತ್ರಪ್ರದರ್ಶನ ಮತ್ತು ವಸ್ತುಪ್ರದರ್ಶನ ಸಾಹಿತ್ಯಕ ಚಟುವಟಿಕೆಗಳ ಕೇಂದ್ರವಾಗಬೇಕು ಎಂದು ಅವರು ಹೇಳಿದರು.
ಗಾಂಧೀ ವಿಚಾರಗಳನ್ನು ಜನಮಾನಸದಲ್ಲಿ ಬಿತ್ತುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಇಡೀ ರಾಷ್ಟ್ರಕ್ಕೆ ಮಾದರಿಯಾಗಬೇಕು. ದೇಶಿಯ ತತ್ವ ಸರಳವಾದ ಗಾಂಧಿ ಬದುಕನ್ನು ಯುವಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಗಾಂಧಿ ಭವನದಲ್ಲಿ ಚಟುವಟಿಕೆಗಳಿರಬೇಕು ಎಂದು ಅವರು ಸಲಹೆ ನೀಡಿದರು.
ಗಾಂಧೀಜಿಯವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸಲು ಅನುವಾಗುವಂತಹ ಕಾರ್ಯಚಟುವಟಿಕೆಗಳನ್ನು ರೂಪಿಸುವ ಕೆಲಸವಾಗಬೇಕು.ಗಾಂಧೀಜಿಯವರ ಸಿದ್ದಾಂತಗಳನ್ನು ಆದರಿಸಿಕೊಂಡು ಯುವಕರನ್ನು ಚೈತನ್ಯಗೊಳಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಗಾಂಧೀಜಿಯವರ ವಿಚಾರ ಕುರಿತ ತರಬೇತಿ ಶಿಬಿರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಏರ್ಪಡಿಸಿದ್ದಲ್ಲಿ ಗಾಂಧಿ ತತ್ವಗಳು ಜನರಿಗೆ ಬಹಳ ಸುಲಭವಾಗಿ ತಲುಪುತ್ತವೆ ಎಂದರು.


ಮಹಾತ್ಮ ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಈ ಕುರಿತು ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದರು.
ಈ ಎಲ್ಲ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿ ರಚಿಸಲಾಗುತ್ತಿದ್ದು,ಜಿಪಂ ಸಿಇಒ,ಎಸ್ಪಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು,ಪ್ರಮುಖ ವಿದ್ಯಾಸಂಸ್ಥೆಗಳ ಮುಖ್ಯಸ್ಥರು,ಗಾಂಧಿವಾದಿಗಳು ಸೇರಿದಂತೆ ಅನೇಕರು ಇದರ ಸದಸ್ಯರಾಗಿರಲಿದ್ದಾರೆ. ಗಾಂಧಿಭವನದ ಈ ಸಮಿತಿಯು ಜಿಲ್ಲೆಯಲ್ಲಿ ಮಹಾತ್ಮಗಾಂಧೀಜಿ ಅವರ ವಿಚಾರಧಾರೆಗಳನ್ನು ಜನರಿಗೆ ಪ್ರಚುರಪಡಿಸುವ ನಿಟ್ಟಿನಲ್ಲಿ ಅಗತ್ಯಕ್ರಮವಹಿಸಲಿ ಎಂದು ಅವರು ಆಶಿಸಿದರು.


ಇಡೀ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆಯಲ್ಲಿಯೇ ಗಾಂಧಿಭವನ ನಿರ್ಮಾಣವಾಗಿದೆ. ಆದರೇ ನಾನಾ ಕಾರಣಗಳಿಂದ ಉದ್ಘಾಟನೆ ತಡವಾಗಿದೆ. ಆದರೂ ಸಹ ದೇಶದ 75ನೇ ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ ಎಂದರು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಳ್ಳಾರಿಯಲ್ಲಿ ನಿರ್ಮಾಣವಾಗಿರುವ ಗಾಂಧೀ ಭವನದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಭವ್ಯಮೂರ್ತಿ,ವಿಶಾಲವಾದ ಸಭಾಂಗಣ,ಗ್ರಂಥಾಲಯ,ಕಂಪ್ಯೂಟರ್ ಲ್ಯಾಬ್, ಗಣ್ಯರ ವಿಶ್ರಾಂತಿ ಕೊಠಡಿ,ಅಧಿಕಾರಿಗಳ ಕೊಠಡಿಗಳಿವೆ. ರಾಷ್ಟ್ರಪಿತ ಗಾಂಧೀಜಿ ಅವರ ಛಾಯಾಚಿತ್ರಗಳ ಪ್ರದರ್ಶನಕ್ಕೆ ಅಗತ್ಯ ವ್ಯವಸ್ಥೆ,ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಗಾಂಧೀಜಿಯವರ ಕುರಿತ ಪುಸ್ತಕಗಳನ್ನೊಳಗೊಂಡ ಗ್ರಂಥಭಂಡಾರ ಮತ್ತು ಗಾಂಧೀಜಿಯವರ ಸ್ಥಿರ ಛಾಯಾಚಿತ್ರಗಳು ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ,ಬುಡಾ ಅಧ್ಯಕ್ಷ ಪಾಲನ್ನ,ಎಪಿಎಂಸಿ ಅಧ್ಯಕ್ಷ ಉಮೇಶ, ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಮಾಜಿ ಸಂಸದರಾದ ಜೆ.ಶಾಂತಾ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಇದೇ ಸಂದರ್ಭದಲ್ಲಿ ಸಚಿವರು ಹಾಗೂ ಜನಪ್ರತಿನಿಧಿಗಳು ದೇಶವಿಭಜನೆಯ ದುರಂತ ಘಟನೆಗಳ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.

LEAVE A REPLY

Please enter your comment!
Please enter your name here