BP NEWS: ಬೆಂಗಳೂರು: ಆಗಸ್ಟ್.12: ಕನ್ನಡದ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ವಿಧಿವಶರಾದರು. ‘ಕೋಡಗನ ಕೋಳಿ ನುಂಗಿತ್ತಾ’, ‘ಅಳಬೇಡಾ ತಂಗಿ ಅಳಬೇಡ’ ‘ಬಿದ್ದೀಯಬ್ಬೇ ಮುದುಕಿ’ ಮೊದಲಾದ ಗೀತೆಗಳ ಮೂಲಕ ಶಿವಮೊಗ್ಗ ಸುಬ್ಬಣ್ಣ ಜಯಪ್ರಿಯತೆಗಳಿಸಿದ್ದರು.
ಗುರುವಾರ ರಾತ್ರಿ ಶಿವಮೊಗ್ಗ ಸುಬ್ಬಣ್ಣ (83) ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಹೃದಯಾಘಾತದ ಹಿನ್ನಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಾಡು ಕುದುರೆ ಓಡಿ ಬಂದಿತ್ತಾ’ ಹಾಡಿನ ಮೂಲಕ ಶಿವಮೊಗ್ಗ ಸುಬ್ಬಣ್ಣ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕನ್ನಡದ ಹಿರಿಯ ಗಾಯಕನ ಸಾಧನೆಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿತ್ತು.
ರಾಜ್ಯ ಸರ್ಕಾರ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿತ್ತು.
ಶಿವಮೊಗ್ಗ ಜಿಲ್ಲೆಯ ನಗರ ಎಂಬ ಸಣ್ಣ ಊರಿನಲ್ಲಿ 1938ರ ಡಿಸೆಂಬರ್ 14ರಂದು ಜನಿಸಿದ್ದರು. ತಂದೆ ಗಣೇಶರಾಯರು, ತಾಯಿ ರಂಗನಾಯಕಿ. ಸುಬ್ಬಣ್ಣ ಅವರು ತಾತ ಶಾಮಣ್ಣ ಬಳಿಕ ಎಂ. ಪ್ರಭಾಕರ್ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದರು.
ಬಿಎ, ಬಿಕಾಂ ಪದವಿ ಪಡೆದಿದ್ದ ಸುಬ್ಬಣ್ಣ 1982ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಆದರೆ ಶಿವಮೊಗ್ಗ ಸುಬ್ಬಣ್ಣ ಎಂದೇ ಖ್ಯಾತರಾಗಿದ್ದರು. ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಶ್ರೇಣಿಯ ಗಾಯಕರಾಗಿದ್ದ ಶಿವಮೊಗ್ಗ ಸುಬ್ಬಣ್ಣ ಕುವೆಂಪು, ಬೇಂದ್ರೆ ಮತ್ತು ನಾಡಿನ ಇತರ ಕವಿಗಳ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವ ಮೂಲಕ ಮನೆಮಾತಾದರು.
1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1988ರಲ್ಲಿ ಕರ್ನಾಟಕ ಸಂಗೀತ ಅಕಾಡೆಮಿ ಪುರಸ್ಕಾರ, 1999ರಲ್ಲಿ ಸಂತ ಶಿಶುನಾಳ ಷರೀಫ ಪ್ರಶಸ್ತಿ ಪಡೆದಿದ್ದ ಶಿವಮೊಗ್ಗ ಸುಬ್ಬಣ್ಣರಿಗೆ ಕುವೆಂಪು ವಿಶ್ವವಿದ್ಯಾಲಯ 2008ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಬೆಂಗಳೂರು ಗಾಯನ ಸಮಾಜ 2003ರಲ್ಲಿ ವರ್ಷದ ಕಲಾವಿದ ಪ್ರಶಸ್ತಿ ನೀಡಿತ್ತು.
ನೂರಾರು ಧ್ವನಿ ಸುರುಳಿಗಳ ಮೂಲಕ ನಾಡಿನ ಮನೆ ಮನೆಗಳನ್ನು ತಲುಪಿದ್ದ ಶಿವಮೊಗ್ಗ ಸುಬ್ಬಣ್ಣ ಅಮೆರಿಕ, ಸಿಂಗಾಪುರ ಮುಂತಾದ ದೇಶಗಳಲ್ಲಿಯೂ ಕಾರ್ಯಕ್ರಮ ನೀಡುವ ಮೂಲಕ ಕನ್ನಡದ ಕಂಪು ಪಸರಿಸಿದ್ದರು.