ತಾಳೂರು ರಸ್ತೆಯ ಗುಣಮಟ್ಟ ಪರಿಶೀಲಿಸಿದ ಸಚಿವ ಸಿಸಿ ಪಾಟೀಲ
BP News ಬಳ್ಳಾರಿ,ಆ.4-ಬಳ್ಳಾರಿಯ ತಾಳೂರು ರಸ್ತೆಯಲ್ಲಿನ ರಸ್ತೆ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ್ ವೀಕ್ಷಣೆ ಮಾಡಿದರು.
ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಮಾಜಿ ಸಂಸದರಾದ ಜೆ.ಶಾಂತಾ, ಬುಡಾ ಆದ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್,ಹನುಮಂತ ಮತ್ತಿತರರು ಇದ್ದರು.
——
ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಭೇಟಿ:ಪರಿಶೀಲನೆ
BP News ಬಳ್ಳಾರಿ,ಆ.04-ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಹೊಸ ಮೋಕಾ, ಗೋಟೂರು, ಇಬ್ರಾಹಿಂಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಹಾಗೂ ಹಾನಿಗೊಳಗಾದ ಬೆಳೆಯನ್ನು ವೀಕ್ಷಿಸಿದರು.
—–
ಶ್ರೀರಾಮಪುರಂ ಕಾಲೋನಿಯ ಪಾಂಡುರಂಗ ದೇವಸ್ಥಾನ ಆವರಣದಲ್ಲಿ ಕೊಠಡಿ ನಿರ್ಮಾಣಕ್ಕೆ ಮನವಿ
BP News ಬಳ್ಳಾರಿ,ಆ.4-ಶ್ರೀರಾಮಪುರಂ ಕಾಲೋನಿ ಪಾಂಡುರಂಗ ಬೀದಿಯಲ್ಲಿರುವ ಶ್ರೀ ಪಾಂಡುರಂಗ ರುಕ್ಮಿಣಿಬಾಯಿ ದೇವಸ್ಥಾನ ಆವರಣದಲ್ಲಿ ಭಕ್ತರ ಅನುಕೂಲಕ್ಕಾಗಿ ಮೂರು ಕೊಠಡಿಗಳನ್ನು ನಿರ್ಮಾಣ ಮಾಡಲು ನೆರವು ನೀಡುವಂತೆ ಸಾರಿಗೆ, ಪರಿಶಿಷ್ಟ ಜಾತಿ ಕಲ್ಯಾಣಾಭಿವೃದ್ಧಿ ಸಚಿವರು ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಿ.ಶ್ರೀರಾಮುಲು, ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಅವರಿಗೆ ಶ್ರೀ ಪಾಂಡುರಂಗ ರುಕ್ಮಿಣಿಬಾಯಿ ದೇವಸ್ಥಾನ ಟ್ರಸ್ಟ್ ಮತ್ತು ಶ್ರೀ ಪಾಂಡುರಂಗ ಬೃಂದಾವನ ಭಜನಾ ಮಂಡಳಿ ಮನವಿ ಮಾಡಿದೆ.
——
ಕಾಂಗ್ರೆಸ್ ನವರು ಅಪ್ಪಿಕೊಂಡರೇನು ಬಂತು? ಜನರು ಕಾಂಗ್ರೆಸ್ ಅನ್ನು ಅಪ್ಪಿಕೊಳ್ಳಬೇಕಲ್ಲ? ಶ್ರೀರಾಮುಲು
BP News ಬಳ್ಳಾರಿ,ಆ.4-ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಿದ್ಧರಾಮೋತ್ಸವದಲ್ಲಿ ಅಪ್ಪಿಕೊಂಡರನೇನು ಬಂತು? ದೇಶದಲ್ಲಿ ಕಾಂಗ್ರೆಸ್ ಅನ್ನು ಜನರು ಅಪ್ಪಿಕೊಳ್ಳಬೇಕಲ್ಲ? ಎಂದು ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ಹೇಳಿದರು.
ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ತಮ್ಮ ಶಕ್ತಿ ಪ್ರದರ್ಶನ ತೋರಿಸಲು ಡಿಕೆಶಿ ಜೊತೆ ಅಪ್ಪಿಕೋ ಚಳುವಳಿ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ನವರು ತಮ್ಮ ಶಕ್ತಿ ಪ್ರದರ್ಶನದ ವೇಳೆ ಎಲ್ಲೆಲ್ಲಿ ಪರಸ್ಪರ ಅಪ್ಪಿಕೊಂಡಿದ್ದಾರೋ ಅಲ್ಲಲ್ಲಿ ಕಾಂಗ್ರೆಸ್ ಧೂಳೀಪಟವಾಗಿ ಹೋಗಿದೆ ಎಂದು ವ್ಯಂಗ್ಯವಾಡಿದ್ದಾರೆ.
——
ಮುಂದೆ ಡಿಕೆಶಿ, ಪರಮೇಶ್ವರ ಉತ್ಸವ ಮಾಡುತ್ತಾರೆ-ಸಿಸಿ ಪಾಟೀಲ್
BP News ಬಳ್ಳಾರಿ,ಆ.4-ಇದೀಗ ಸಿದ್ಧರಾಮೋತ್ಸವ ಮಾಡಿದಂತೆ ಕಾಂಗ್ರಸ್‍ನವರು ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಉತ್ಸವ ಮತ್ತು ಡಾ.ಜಿ.ಪರಮೇಶ್ವರ ಉತ್ಸವ ಮಾಡುತ್ತಾರೆ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಅವರು ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಉತ್ಸವ ಆಗಿದೆ. ಬಿಜೆಪಿಯಲ್ಲಿ ಇಂತಹ ವಯಕ್ತಿಕ ಪ್ರತಿಷ್ಠೆಯ ಉತ್ಸವಗಳು ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದ್ದುದೇ ಆಗಿದ್ದರೆ ಸಿದ್ಧರಾಮಯ್ಯ ಉತ್ಸವಕ್ಕೆ ಜನರಿಗೆ ದುಡ್ಡು ಕೊಟ್ಟು ಕರೆಯಿಸಿಕೊಳ್ಳುವುದು ಅಗತ್ಯವಿರಲಿಲ್ಲ ಎಂದು ತಿಳಿಸಿದ್ದಾರೆ.
——–
ಸಚಿವ ಸಿಸಿ ಪಾಟೀಲ್ ಅವರಿಂದ ಸರ್ಕಾರಿ ವಿಐಐಪಿ ಅತಿಥಿಗೃಹ ಲೋಕಾರ್ಪಣೆ
BP News ಬಳ್ಳಾರಿ,ಆ.4-ಜಿಲ್ಲೆಯಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಇನ್ನಷ್ಟು ಅನುದಾನ ಒದಗಿಸುವುದಾಗಿ ಲೋಕೋಪಯೋಗಿ ಸಚಿವರಾದ ಸಿಸಿ ಪಾಟೀಲ್ ಭರವಸೆ ನೀಡಿದರು.
ಇಲ್ಲಿನ ಡಾ.ರಾಜಕುಮಾರ್ ರಸ್ತೆಯಲ್ಲಿ ನೂತನವಾಗಿ ರೂ.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಿವಿಐಪಿ ಸರ್ಕಾರಿ ಅತಿಥಿಗೃಹದ ಲೋಕಾರ್ಪಣೆಗೊಳಿಸಿದ ಬಳಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹುಬ್ಬಳ್ಳಿ ಮಾದರಿಯಲ್ಲಿ ಅತಿಥಿಗೃಹ ಬಳಕೆಯಾಗಬೇಕು ಎಂದರು.
ಸಚಿವರಾದ ಬಿ.ಶ್ರೀರಾಮುಲು, ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಬಿ.ನಾಗೇಂದ್ರ, ಇ.ತುಕಾರಾಮ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಪಾಲಣ್ಣ ಇನ್ನಿತರರು ಇದ್ದರು.
—–