BP NEWS: ಬಳ್ಳಾರಿ: ಆಗಸ್ಟ್.02: ಬಳ್ಳಾರಿ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬಳ್ಳಾರಿ ತಾಲೂಕಿನಾದ್ಯಂತ ಭಾರಿ ಮಳೆಯಾಗಿದ್ದು ಮೋಕ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೆರೆಹಾವಳಿ ಉಂಟಾಗಿದೆ.
ಅಂದಾಜು ಸರಿಸುಮಾರು 300 ಮನೆಗಳು ಜಲಾವೃತಗೊಂಡಿವೆ ಎಂದು ಹೇಳಲಾಗುತ್ತಿದೆ. ಮನೆಗಳಲ್ಲಿನ ಸಾಮಗ್ರಿಗಳು ದಿನಸಿ, ಬಟ್ಟೆ, ಬರೆಗಳಲ್ಲ ನೀರು ಪಾಲಾಗಿದ್ದು ಗ್ರಾಮಸ್ಥರು ಮನೆಯಿಂದ ನೀರು ಹೊರಹಾಕಲು ಹರ ಸಾಹಸ ಪಡುತ್ತಿದ್ದಾರೆ.
ಈಗ ತಾನೆ ಜಮೀನಿನಲ್ಲಿ ನೆಟ್ಟಿದ್ದ ಬೆಳೆ ಸಂಪೂರ್ಣ ಹಾಳಾಗಿದೆ. ಹೊಸಮೋಕಾ ಶಾಲಾ ಆವರಣ ಸಂಪೂರ್ಣ ಜಲಾವೃತಗೊಂಡಿದ್ದು ಶಾಲಾ ವಿದ್ಯಾರ್ಥಿಗಳು, ಸಿಬ್ಬಂದಿಗಳು ಕಷ್ಟ ಪಡುವಂತಾಗಿದೆ.
ಮೋಕ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಗ್ರಾಮಾಂತರ ಶಾಸಕರಾದ ಬಿ ನಾಗೇಂದ್ರ ಅವರು ಭೇಟಿ ನೀಡಿ ಪರಿಶೀಲಿಸಿದ್ದಲ್ಲದೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಮಳೆಯಿಂದ ಹಾಳಾದ ಮನೆ, ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.