BP NEWS: ಬಳ್ಳಾರಿ: ಜುಲೈ.30: ಚೈಲ್ಡ್‍ಲೈನ್(1098) ಕೇಂದ್ರ-ಬಿಡಿಡಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಕಾರ್ಡ್-ಚೈಲ್ಡ್‍ಲೈನ್ ನೋಡಲ್ ಸಂಸ್ಥೆ ಸಹಯೋಗದಲ್ಲಿ ನಗರದ ವಾಡ್ರ್ಲಾ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರದಂದು ‘ಮಾನವ ಕಳ್ಳಸಾಗಾಣಿಕೆಯ ವಿರುದ್ದ ವಿಶ್ವ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ನ್ಯಾಯಾಲಯದ ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಕೃಷ್ಣರಾಜ್.ಕೆ ಅವರು ಕಾರ್ಯಕ್ರಮನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾನವ ಕಳ್ಳ ಸಾಗಾಣಿಕೆ ಒಂದು ಅಪರಾಧವಾಗಿದ್ದು, ಅಪ್ರಾಪ್ತ ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡಿ ಬೇರೊಂದು ಜಾಗಕ್ಕೆ ಮಾರಾಟ ಮಾಡುವುದು ಸಮಾಜದ ದುರಂತವಾಗಿದೆ ಎಂದರು.
ನಮ್ಮ ಸಂವಿಧಾನ ಅಡಿಯಲ್ಲಿ ಕಾನೂನು ಮೂಲಕ ಸಮಾಜದ ದುಷ್ಟಕೃತ್ಯಗಳನ್ನು ತಡೆಯಬಹುದು ಮತ್ತು ನಮ್ಮ ಸಂವಿಧಾನದ ವಿಧಿ 23,24 ಶೋಷಣೆಯ ವಿರುದ್ಧದ ಹಕ್ಕು ಇದೆ ಹಾಗೂ ಸಮಾಜದಲ್ಲಿ ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ತಡೆಯಲು ಸರ್ಕಾರವು ಅನೇಕ ಕಾಯ್ದೆ, ಕಾನೂನು ರೂಪಿಸಿದೆ ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿಡಿಡಿಎಸ್ ಸಂಸ್ಥೆಯ ಡಾ.ಹೆನ್ರಿ ಡಿ’ಸೋಜ ಅವರು ಮಾತನಾಡಿ, ಕಾನೂನು ಜಾರಿಗೊಳಿಸುವ ಸಂಸ್ಥೆಗಳು, ಪೊಲೀಸ್ ಇಲಾಖೆ,
ನ್ಯಾಯಾಲಯ ಇಲಾಖೆ ಮತ್ತು ವಿವಿಧ ಸರ್ಕಾರ ಇಲಾಖೆಗಳು ಕಾನೂನು ಜಾರಿಗೆ ತರಬೇಕು ಎಂದರು.
ಮಕ್ಕಳ ಕಳ್ಳ ಸಾಗಾಣಿಕೆ ತಡೆಗಟ್ಟಲು, ಪೊಲೀಸ್, ರಾಜಕಾರಣಿಗಳು, ಇಲಾಖೆಯ ಸಿಬ್ಬಂದಿಯವರು ಜೊತೆಗೆ ಸಮಾಜವು ಕೈ ಜೋಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ನಿರ್ದೇಶಕರಾದ ಫಾದರ್ ಯಾಗಪ್ಪ ಅವರು ಮಕ್ಕಳ ಸಹಾಯವಾಣಿಯ ಕಿರುಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಠಾಣೆಯ ಮಾನವ ಕಳ್ಳ ಸಾಗಾಣೆ ತಡೆ ಘಟಕದ ಪೊಲೀಸ್ ಇನ್ಸ್ಸ್‍ಪೆಕ್ಟರ್‍ಗಳಾದ ಟಿ.ಸುಭಾಷ್‍ಚಂದ್ರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಹೇಗೆ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಎಸ್‍ಜೆಪಿಯು ಘಟಕದ ಸಿಬ್ಬಂದಿ ಲಲಿತ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಜಯಲಕ್ಷ್ಮೀ, ಶಿಕ್ಷಣ ಇಲಾಖೆಯ ವೇದವಾತಿ, ಚೈಲ್ಡ್‍ಲೈನ್ ನೋಡಲ್ ನಿರ್ದೇಶಕರಾದ ಬಿ.ಡಿ.ಗೌಡ ಹಾಗೂ ಸಂಯೋಜಕರಾದ ಮಂಜುನಾಥ್ ಮತ್ತು ಆನಂದ, ವಾಡ್ರ್ಲಾ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ವಿಕ್ಟರ್ ಇಮ್ಮಾನೂಯಲ್, ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿಯವರು ಸೇರಿದಂತೆ 200ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.