BP NEWS: ಬಳ್ಳಾರಿ: ಜುಲೈ.28: ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರವರು ರಂಗಭೂಮಿ ಸೇವೆ ಕರ್ನಾಟಕದ ಬಳ್ಳಾರಿ ನಗರದಿಂದಲೇ ಆರಂಭವಾಗಿದೆ. ರಾಘವರ ಅಭಿನಯ ಪ್ರತಿಭೆಯಿಂದ ನಾಟಕ ಕಲೆಯ ಬಗ್ಗೆ ಅವರಿಗಿದ್ದ ಅಪಾರ ಜ್ಞಾನದಿಂದ ಪ್ರಖ್ಯಾತ ನ್ಯಾಯವಾದಿಯಾಗಿ ಅಗ್ರ ನಟರಾಗಿ ನಾಟಕಗ್ರೇಸರ ಚಕ್ರವರ್ತಿಯೆಂದು ಹೆಸರು ಪಡೆದು ಚರಿತ್ರೆ ಸೃಷ್ಟಿಸಿದ್ದಾರೆ. ಅವರ ಪ್ರತಿಭೆ ಬೆಂಗಳೂರು, ಮದ್ರಾಸ್, ಬೊಂಬಾಯಿಗಳಲ್ಲಿ ವಿಕಾಸಗೊಂಡು ಆಂಧ್ರ, ಬಂಗಾಳಿ, ಬರ್ಮಾದವರೆಗೆ ಹಬ್ಬಿ ಬಳ್ಳಾರಿ ಮತ್ತು ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ರಾಘವರವರು ಯುರೋಪ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಇನ್ನು ಮುಂತಾದ ದೇಶಗಳಲ್ಲಿ ನಟನೆಯನ್ನು ಪ್ರದರ್ಶಿಸಿ ಅಂತಾರಾಷ್ಟ್ರೀಯ ಕೀರ್ತಿಯನ್ನು ಪಡೆದಿದ್ದಾರೆ. ಬಳ್ಳಾರಿ ರಾಘವ ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಗಳಲ್ಲಿ ರಂಗಭೂಮಿಯಲ್ಲಿ ನಟನೆಯನ್ನು ಪ್ರದರ್ಶಿಸಿದ್ದಾರೆ. ರಾಘವರವರು “ಸರಿಪಡನಿ ಸಂಗತುಲು” ಎಂಬ ನಾಟಕವನ್ನು ರಚಿಸಿದ್ದಾರೆ. ಈ ರಂಗಭೂಮಿಗೆ ಸೇವೆ ಸಲ್ಲಿಸಿದ ಬಳ್ಳಾರಿ ರಾಘವರ ಹೆಸರಿನಲ್ಲಿ ಸಂಸ್ಥೆಯಿಂದ ಬಳ್ಳಾರಿ ರಾಘವರ ರಾಜ್ಯ ಪ್ರಶಸ್ತಿಗಳು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಲಾ ಒಬ್ಬೊಬ್ಬರಿಗೆ ಹಾಗೂ ಬಳ್ಳಾರಿ ರಾಘವರ ಜಿಲ್ಲಾ ಪ್ರಶಸ್ತಿಗಳು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಲಾ ಇಬ್ಬರಿಗೆ ನೀಡುತ್ತಾ ಬಂದಿದ್ದೇವೆ. ಒಬ್ಬ ರಂಗಭೂಮಿ ಕಲಾವಿದರಿಗೆ ರಾಜ್ಯ ಪ್ರಶಸ್ತಿಗೆ ರೂ. 15,೦೦೦/- ಗಳು ನಗದು ಮತ್ತು ರಾಘವರವರ ಬೆಳ್ಳಿ ಪದಕ ನೆನಪಿನ ಕಾಣಿಕೆ, ಜಿಲ್ಲಾ ಪ್ರಶಸ್ತಿಗೆ ರೂ. 5೦೦೦/- ಗಳ ನಗದು ರಾಘವರವರ ಬೆಳ್ಳಿ ಪದಕ ನೆನಪಿನ ಕಾಣಿಕೆ ನೀಡಲಾಗುತ್ತದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಂಗಭೂಮಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಶಸ್ತಿಗಳನ್ನು 2009 ರಿಂದ ಪ್ರದಾನ ಮಾಡಿಕೊಂಡು ಬರುತ್ತಿದ್ದೇವೆ.
ಇದೀಗ ರಾಘವ ಮೆಮೋರಿಯಲ್ ಅಸೋಸಿಯೇಷನ್ ಸ್ಥಾಪನೆಯಾಗಿ 75 ವಸಂತಗಳು ಪೂರೈಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ವತಿಯಿಂದ ಅಮೃತ ಮಹೋತ್ಸವದ ಅಂಗವಾಗಿ ನಿರಂತರ ಪ್ರತಿ ತಿಂಗಳ ಒಂದೊಂದು ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರವರ 142ನೇ ಜಯಂತಿಯ ಅಂಗವಾಗಿ ದಿನಾಂಕ 2ಆಗಸ್ಟ್ 2022ರಂದು ಮಂಗಳವಾರ ಸಂಜೆ 5.೦೦ ಗಂಟೆಗೆ ಮೆರವಣಿಗೆ ಮೂಲಕ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿರುವ ಬಳ್ಳಾರಿ ರಾಘವ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ನಂತರ 6.30ಗಂಟೆಗೆ ನಗರದ ರಾಘವ ಕಲಾಮಂದಿರದಲ್ಲಿ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ 142ನೇ ಜಯಂತಿ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಡಾ|| ಆಕಾಶ್ ಶಂಕರ್, ಮಾನ್ಯ ಸಹಾಯಕ ಆಯುಕ್ತರು, ಬಳ್ಳಾರಿ ರವರು ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದಲಿಂಗೇಶ ಕೆ.ರಂಗಣ್ಣವರ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಕೆ.ಚನ್ನಪ್ಪ ಅವರು ವಹಿಸಲಿದ್ದಾರೆ. ಕನ್ನಡ ರಂಗಭೂಮಿ ಸೇವೆ ಸಲ್ಲಿಸಿದವರಿಗೆ ರಾಘವ ರಾಜ್ಯ ಪ್ರಶಸ್ತಿಯನ್ನು ಧಾರವಾಡದ ಶ್ರೀ ಕೊಟ್ರೇಶ ಶಿವಪ್ಪ ಅಂಗಡಿ ಅವರಿಗೆ ಮತ್ತು ಜಿಲ್ಲಾ ಪ್ರಶಸ್ತಿಗಳನ್ನು ಪದ್ಮಾ ಕೂಡ್ಲಿಗಿ ಮತ್ತು ಮುದೇನೂರು ಉಮಾಮಹೇಶ್ವರ ಹೊಸಪೇಟೆ ಇವರುಗಳಿಗೆ ಪ್ರದಾನ ಮಾಡಲಾಗುವುದು.
ತದನಂತರ ಲಲಿತ ಕಲಾರಂಗ ಮರಿಯಮ್ಮನಹಳ್ಳಿ ಇವರಿಂದ ಕಿರಂ ನಾಗರಾಜ ರಚನೆಯ ಹಾಗೂ ಸಿ.ಕೆ.ನಾಗರಾಜ ಇವರ ನಿರ್ದೇಶನದಲ್ಲಿ ಕಾಲಜ್ಞಾನಿ ಕನಕ ಎಂಬ ಕನ್ನಡ ನಾಟಕವನ್ನು ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 3 ಆಗಸ್ಟ್ ರಂದು ಬುಧವಾರ ಸಂಜೆ 6-30 ಗಂಟೆಗೆ ರಾಘವ ಕಲಾಮಂದಿರದಲ್ಲಿ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು ಮತ್ತು ಹೈದರಾಬಾದ್‌ನ ಗಜಲ್ ರಚಯುತ, ಸೀನಿಯರ್ ಜರ್ನಲಿಸ್ಟ್ ಶ್ರೀ ಬಿಕ್ಕಿ ಕೃಷ್ಣ ಅವರುಗಳು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಕೋಟೇಶ್ವರರಾವು ಅವರು ವಹಿಸಲಿದ್ದಾರೆ. ತೆಲುಗು ರಂಗಭೂಮಿ ಸೇವೆ ಸಲ್ಲಿಸಿದವರಿಗೆ ರಾಘವ ರಾಜ್ಯ ಪ್ರಶಸ್ತಿಯನ್ನು ಶ್ರೀಕಾಕುಳಂನ ಶ್ರೀ ಗೋಕವಲಸ ಕೃಷ್ಣಮೂರ್ತಿ ಬಳ್ಳಾರಿ ರಾಘವರವರ ಜಿಲ್ಲಾ ಪ್ರಶಸ್ತಿಯನ್ನು ಬಳ್ಳಾರಿಯ ಶ್ರೀ ಕೆ.ಕಾಳಿದಾಸ ಮತ್ತು ಕರ್ನೂಲು ಜಿಲ್ಲೆ ಕೌತಾಳಂನ ಶ್ರೀ ಕೆ.ಮಾರುತಿ ಮೋಹನ ಇವರುಗಳಿಗೆ ಪ್ರದಾನ ಮಾಡಲಾಗುವುದು.
ತದನಂತರ ಸದ್ಗುರು ಕಳಾ ನಿಲಯಂ ಗುಂಟೂರು ಇವರಿಂದ ದಿ|| ಶಿಷ್ಟಾ÷್ಲ ಚಂದ್ರಶೇಖರ ರಚನೆಯ ಹಾಗೂ ಶ್ರೀ ಕೆ.ವಿ.ಪ್ರಸಾದ್ ಇವರ ನಿರ್ದೇಶನದಲ್ಲಿ ಬಹುರೂಪಿ ಎಂಬ ತೆಲುಗು ಸಾಮಾಜಿಕ ನಾಟಕವನ್ನು ಪ್ರದರ್ಶನ ನೀಡಲಿದ್ದಾರೆ.