BP NEWS: ರಾಯಚೂರು: ಜೂನ್.27: ಕನ್ನಡ ನಾಡಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ. ಗ್ರಾಮೀಣ ಪ್ರದೇಶದ ಜನರಿಗಾಗಿ ಕೆರೆ, ಕಟ್ಟೆಗಳನ್ನು ನಿರ್ಮಿಸಿ ನಾಡಿನ ಸಮಸ್ತ ಜನರ ಮನ ಗೆದ್ದವರು ಎಂದು ರಾಯಚೂರು ತಾಲೂಕು ತಹಸೀಲ್ದಾರ್ ಡಾ.ಹಂಪಣ್ಣ ಸಜ್ಜನ್ ಅವರು ಹೇಳಿದರು.
ಅವರು ಜೂ.27ರ ಸೋಮವಾರ ದಂದು ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಜಯಂತಿ ಆಚರಣೆ ಹಾಗೂ ಪಠ್ಯ ಪುಸ್ತಕ ಅಂಶವನ್ನು ಸರಿಯಾಗಿ ಅಧ್ಯಾಯನ ಮಾಡಬೇಕು. ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಉನ್ನತ ಸ್ಥಾನವನ್ನು ಅಲಂಕರಿಸಬೇಕೆAದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು
ಈ ವೇಳೆ ಉಪನ್ಯಾಸಕರಾಗಿ ನಗರದ ಪೊಲೀಸ್ ಕಾಲೋನಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಂಜುನಾಥ ಐಲಿ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣದ ಜೊತೆಗೆ ಜನ ಸಾಮಾನ್ಯರಿಗಾಗಿ ಕೆರೆ, ಕಟ್ಟೆಗಳನ್ನು ಕಟ್ಟಿಸಿದ್ದಾರೆ, ಮರ ಗಿಡಗಳನ್ನು ಬೆಳೆಸಿದ್ದಾರೆ, ವ್ಯವಸಾಯಕ್ಕೆ ಹೆಚ್ಚು ಒತ್ತನ್ನು ನೀಡಿದ್ದರು. ಅವರು ಕಟ್ಟಿದ ಕೆರೆ ಕಟ್ಟೆಗಳನ್ನು, ಕಟ್ಟಡಗಳನ್ನು ಉಳಿಸುವ ಕಾರ್ಯ ಆಗಬೇಕು. ವ್ಯವಸಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕು ಎಂದು ಹೇಳಿದರು.
ಕೆಂಪೇಗೌಡರು ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದರು. ಎಲ್ಲಾ ಸಮುದಾಯದವರು ಸಹಬಾಳ್ವೆಯಿಂದ ಜೀವನ ನಡೆಸುವಂತೆ ಮಾಡಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ, ಜಾನಪದ ಕಲೆಗಳ ಬೆಳೆವಣಿಗೆ ಜೊತೆಗೆ ಎಲ್ಲಾ ಸಮುದಾಯದವರಿಗೆ ಅಧಿಕಾರ, ಶಿಕ್ಷಣ, ಸವಲತ್ತುಗಳನ್ನು ನಾಡಪ್ರಭು ಕೆಂಪೇಗೌಡರು ನೀಡಿದ್ದರು ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳ ವಿ.ನಾಯಕ ಸೇರಿದಂತೆ ಇತರರು ಜಯಂತಿ ಕಾರ್ಯಕ್ರಮದಲ್ಲಿ ಇದ್ದರು.