
ಬೆಂಗಳೂರು, ಜ.27: ಖ್ಯಾತ ಪತ್ರಕರ್ತ ಹಾಗೂ ಲೇಖಕ ದಿವಂಗತ ರವಿ ಬೆಳಗೆರೆ ಅವರ ಕೃತಿ ‘ಹೇಳಿ ಹೋಗು ಕಾರಣ’ ವನ್ನು ನಕಲಿ ಮುದ್ರಣ ಮಾಡಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಭಾವನ ಪ್ರಕಾಶನದ ನಿರ್ದೇಶಕಿ ಭಾವನ ಬೆಳಗೆರೆ ಮಾಡಿದ್ದಾರೆ. ಈ ವಿಚಾರವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಮೂಲಕ ಬಹಿರಂಗಪಡಿಸಿದ್ದು, ಫ್ಲಿಪ್‌ಕಾರ್ಟ್, ಅಮೇಜಾನ್ ಹಾಗೂ ಮೀಶೋ ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಒಂದು ಕೋಟಿ ರೂಪಾಯಿ ಮೊತ್ತದ ದಾವೆ ಹೂಡಲು ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.
ವೀಡಿಯೋ ಸಂದೇಶದಲ್ಲಿ ಮಾತನಾಡಿದ ಭಾವನ ಬೆಳಗೆರೆ, “ನನ್ನ ತಂದೆ ರವಿ ಬೆಳಗೆರೆ ಅವರು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿರುವ ಬರಹದ ಗುಣಮಟ್ಟ, ಪದಗಳ ಸ್ಪಷ್ಟತೆ, ಅಧ್ಯಾಯಗಳ ಸರಿಯಾದ ವಿನ್ಯಾಸ ಹಾಗೂ ಶುದ್ಧ ಪ್ರೂಫ್‌ರೀಡಿಂಗ್—ಈ ಎಲ್ಲ ಅಂಶಗಳನ್ನು ನಾವು ಇಂದಿಗೂ ಅದೇ ಶ್ರಮದಿಂದ ಕಾಪಾಡಿಕೊಂಡು ಬರುತ್ತಿದ್ದೇವೆ. ಭಾವನ ಪ್ರಕಾಶನದಿಂದ ಮುದ್ರಣವಾಗುವ ಪ್ರತಿಯೊಂದು ಪುಸ್ತಕವೂ ಯಾವುದೇ ತಪ್ಪಿಲ್ಲದೆ ಉನ್ನತ ಗುಣಮಟ್ಟದೊಂದಿಗೆ ಹೊರಬರುತ್ತದೆ,” ಎಂದು ಹೇಳಿದ್ದಾರೆ.

ಆದರೆ, ‘ಹೇಳಿ ಹೋಗು ಕಾರಣ’ ಸೇರಿದಂತೆ ರವಿ ಬೆಳಗೆರೆ ಅವರ ಕೆಲವು ಕೃತಿಗಳನ್ನು ಸ್ಕ್ಯಾನ್ ಮಾಡಿ, ಅಸಹ್ಯ ಹಾಗೂ ಕಳಪೆ ಗುಣಮಟ್ಟದಲ್ಲಿ ಮುದ್ರಿಸಿ, ‘ಡಿಸ್ಕೌಂಟ್ ಸೇಲ್’ ಹೆಸರಿನಲ್ಲಿ ಮಾರಲಾಗುತ್ತಿದೆ. ‘ಹೇಳಿ ಹೋಗು ಕಾರಣ’ ಕೃತಿಯನ್ನು ಕೇವಲ 147 ರೂಪಾಯಿಗೆ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿಯಲ್ಲಿ ಬೆಳಗೆರೆ ಅವರ ‘ಮಾಂಡೋವಿ’ ಮತ್ತು ‘ಹಿಮಾಲಯನ್ ಬ್ಲಂಡರ್’ ಪುಸ್ತಕಗಳ ನಕಲಿ ಮುದ್ರಣ ಮತ್ತು ಮಾರಾಟದ ಬಗ್ಗೆ ಸಹ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ನಕಲಿ ಪ್ರತಿಗಳಿಂದ ನಾವು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಪುಸ್ತಕಗಳ ಗುಣಮಟ್ಟಕ್ಕೆ ಧಕ್ಕೆ ಉಂಟಾಗುತ್ತಿದೆ. ಜೊತೆಗೆ ತಂದೆ ತೀರಿ ಹೋದ ನಂತರ ನಾವು ಹಣಕ್ಕಾಗಿ ಅವರ ಹೆಸರನ್ನು ದುರುಪಯೋಗಪಡಿಸುತ್ತಿದ್ದೇವೆ ಎಂಬ ತಪ್ಪು ಭಾವನೆ ಜನರಲ್ಲಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಎಂದು ಭಾವನ ಬೆಳಗೆರೆ ವೀಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ನಕಲಿ ಮುದ್ರಣ ಹಾಗೂ ಅನಧಿಕೃತ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಪ್ರತಿ ಆನ್‌ಲೈನ್ ಪ್ಲಾಟ್‌ಫಾರ್ಮ್ ವಿರುದ್ಧವೂ ಒಂದು ಕೋಟಿ ರೂಪಾಯಿ ಮೊತ್ತದ ದಾವೆ ಹೂಡಲಾಗುವುದು ಎಂದು ಭಾವನ ಬೆಳಗೆರೆ ಎಚ್ಚರಿಕೆ ನೀಡಿದ್ದಾರೆ.





