BP NEWS: ಬಳ್ಳಾರಿ: ಜನವರಿ.15:
ಜಿಲ್ಲೆಯಲ್ಲಿ ಸುಸಜ್ಜಿತವಾದ ಭೋವಿ ಸಮುದಾಯ ಭವನವನ್ನು ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ರಾಘವ ಕಲಾಮಂದಿರದಲ್ಲಿ ಏರ್ಪಡಿಸಿದ್ದ 852ನೇ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಭೋವಿ ಸಮುದಾಯ ಭವನ ನಿರ್ಮಾಣ ಮಾಡಿಕೊಡಲಾಗುವುದು. ಬಳ್ಳಾರಿ ನಗರ ಅಥವಾ ಗ್ರಾಮೀಣ ಭಾಗದಲ್ಲಿ ಸ್ಥಳ ಗುರುತಿಸಿದರೆ ಶ್ರೀಘದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಮತ್ತು ನನ್ನ ವೈಯಕ್ತಿಕವಾಗಿ 10 ಲಕ್ಷ ರೂ. ನೀಡುತ್ತೇನೆ ಎಂದರು.
ಸಮುದಾಯದವರಿಗೆ ಕಲ್ಲು, ಬಂಡೆ ಒಡೆಯಲು ಸರ್ಕಾರ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸಂಗನಕಲ್ಲು, ಬಂಡಿಹಟ್ಟಿ ಇತರೆ ಪ್ರದೇಶಗಳನ್ನು ಗುರುತಿಸಿ ಸರ್ಕಾರ ನಿಯಮಗಳ ಪ್ರಕಾರ ಅಧಿಕೃತವಾಗಿ ಹಾಗೂ ಮಿತಿಯಾಗಿ ಕಲ್ಲುಬಂಡೆ ಒಡೆಯಲು ಅವಕಾಶ ಕಲ್ಪಿಸಲಾಗುವುದು. ಭೋವಿ ಸಮುದಾಯದವರು ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ಮಾಡಿದರು.
ಕಲ್ಲು, ಮಣ್ಣು, ಸಿಮೆಂಟ್ ಹೊತ್ತು ಮನೆ ಕಟ್ಟುವಂತವರು. ನಮ್ಮ ಕಾಲದ ಇಂಜಿನಿಯರ್ ಗಳು ಇವರೇ ಆಗಿರುತ್ತಿದ್ದರು. ಕೇವಲ ತಮ್ಮ ಯುಕ್ತಿಯಿಂದಲೇ ಸಂಪೂರ್ಣ ಮನೆ ಸುಂದರವಾಗಿ ಕಟ್ಟಲು ಅಡಿಪಾಯ ಹಾಕುತ್ತಿದ್ದರು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಿಷ್ಠಿರುದ್ರಪ್ಪ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಸಂತರ ವಿಚಾರ ಹಾಗೂ ಸಾಧನೆಗಳನ್ನು ಪ್ರತಿಯೊಬ್ಬರು ಅನುಕರಣೆ ಮಾಡುವ ಮನೋಭಾವನೆ ಹೊಂದುವಂತಾಗಬೇಕು ಎಂದು ಹೇಳಿದರು.
ಶಿವಯೋಗಿ ಸಿದ್ಧರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿ ಹಾಡಿದ್ದಾರೆ. ಅವುಗಳ ಪೈಕಿ ಈಗ 1,679 ವಚನಗಳು ಮಾತ್ರ ಲಭಿಸಿವೆ. ಶಿವಯೋಗಿ ಸಿದ್ದರಾಮೇಶ್ವರರು ಶ್ರೇಷ್ಠ ವಚನಕಾರರಾಗಿದ್ದರು. ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು. ಅಧ್ಯಾತ್ಮ ಪರಂಪರೆ ಹೊಂದಿರುವ ದೇಶದಲ್ಲಿ ದಿವ್ಯಜ್ಞಾನಿಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಶ್ವೇತಾ ಅವರು ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಪಿಹೆಚ್ ಡಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಕವಿತಾ ಗಂಗೂರು ಮತ್ತು ತಂಡದಿಂದ ವಚನ ಸಾಹಿತ್ಯಗಳನ್ನೊಳಗೊಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಅದ್ದೂರಿ ಮೆರವಣಿಗೆ; ಗಮನ ಸೆಳೆದ ಕಲಾ ತಂಡಗಳು:
ಜಯಂತಿಯ ಅಂಗವಾಗಿ ನಗರದ ಕನಕ ದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಶ್ವೇತ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಷೆ ರಾಂಡೋಲ್, ಹಗಲು ವೇಷಧಾರಿಗಳ ನೃತ್ಯ ಪ್ರದರ್ಶನ ಸೇರಿದಂತೆ ನಾನಾ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಜಯಂತಿಯ ಮೆರವಣಿಗೆಯು ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ರಾಘವ ಕಲಾ ಮಂದಿರದ ವೇದಿಕೆ ಸಭಾಂಗಣದವರೆಗೆ ತಲುಪಿತು. ಮೆರವಣಿಗೆಯು ಅದ್ದೂರಿಯಾಗಿ, ಸಂಭ್ರಮದಿಂದ ನಡೆಯಿತು.