BP NEWS: ಬಳ್ಳಾರಿ: ಡಿಸೆಂಬರ್.07: ಕೃಷಿ ಇಲಾಖೆಯಿಂದ ಕಂಪ್ಲಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರ ಕಚೇರಿಯ ನೂತನ ಕಟ್ಟಡದ ಉದ್ಘಾಟನೆಯನ್ನು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಬುಧವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುಮಾರು 5ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರೈತ ಸಂಪರ್ಕ ಕೇಂದ್ರವು ಈ ಭಾಗದ ರೈತರ ಹಲವು ವರ್ಷಗಳ ಬೇಡಿಕೆಯಾಗಿತ್ತು, ಅದು ಈಗ ನೆರವೇರಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಾಳೆಯಿಂದಲೇ ಎಲ್ಲಾ ಕಡೆ ಭತ್ತ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ರೈತರ ಸಂಕಷ್ಟಗಳಿಗೆ ಸ್ಪಂದಿಸುವುದು ಮತ್ತು ಅವರ ಏಳಿಗೆಯೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಂಪ್ಲಿ ಶಾಸಕರಾದ ಜೆ.ಎನ್.ಗಣೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಬೇಕಾದರೆ ಮಧ್ಯವರ್ತಿಗಳಿಲ್ಲದ ಬೆಳೆ ಖರೀದಿ ಕೇಂದ್ರಗಳು ತೆರೆಯಬೇಕು ಎಂದು ತಿಳಿಸಿ, ಹಾಗೆಯೇ ಭತ್ತ ಮತ್ತು ಜೋಳ ಖರೀದಿ ಕೇಂದ್ರಗಳು ವರ್ಷವಿಡೀ ತೆರೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗುತ್ತಿಗನೂರು ವಿರೂಪಾಕ್ಷಗೌಡ, ಮಾಜಿ ಸಂಸದೆ ಜೆ.ಶಾಂತಾ, ಕಂಪ್ಲಿ ಪುರಸಭೆಯ ಅಧ್ಯಕ್ಷರಾದ ಶಾಂತಲಾ ವಿದ್ಯಾಧರ, ಕಂಪ್ಲಿ ಕೃಷಿಕ ಸಮಾಜ ಅಧ್ಯಕ್ಷರಾದ ಜಿ.ಲಕ್ಷ್ಮಿಕಾಂತರೆಡ್ಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಮಲ್ಲಿಕಾರ್ಜುನ, ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕರಾದ ಸಿ.ಆರ್.ಚಂದ್ರಶೇಖರ್, ಸಿರುಗುಪ್ಪ ಸಹಾಯಕ ಕೃಷಿ ನಿರ್ದೇಶಕರಾದ ಎಸ್.ಬಿ.ಪಾಟೀಲ್ ಸೇರಿದಂತೆ ರೈತ ಮುಖಂಡರುಗಳು ಹಾಗೂ ಇತರರು ಇದ್ದರು.